ಗದಗ: ಇದೇ ಮೊದಲ ಬಾರಿಗೆ ಸ್ಕೌಟ್ಸ್ ಆಂಡ್ ಗೈಡ್ಸ್ (Scouts and Guides) ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕರುನಾಡಲ್ಲಿ (Karnataka) ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಪಂಚದ 77 ದೇಶಗಳಿಂದ 50 ರಿಂದ 60 ಸಾವಿರ ಜನರು ಬರುವ ನಿರೀಕ್ಷೆಯಿದೆ. ಆ ವಿದೇಶಿಗಳಿಗೆ ಉತ್ತರ ಕರ್ನಾಟಕದ ಪ್ರಸಿದ್ಧ ಖಡಕ್ ರೊಟ್ಟಿ (Khadak Roti) ಹಾಗೂ ವಿವಿಧ ಬಗೆಯ ಚಟ್ನಿ ಕೈರುಚಿ ತೋರಿಸಲು ಮುದ್ರಣ ಕಾಶಿ ಮುಂದಾಗಿದೆ.
ದಕ್ಷಿಣ ಕನ್ನಡ (ಜಿಲ್ಲೆ ಮೂಡಬಿದರೆಯಲ್ಲಿ (Moodubidire) ಮೊದಲ ಬಾರಿಗೆ ಸ್ಕೌಟ್ಸ್ ಆಂಡ್ ಗೈಡ್ಸ್‌ನ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಮೇಳ ನಡೆಯಲಿದೆ. ಇದೇ ದಿನಾಂಕ 21 ರಿಂದ 27 ರ ವರೆಗೆ ಅದ್ದೂರಿಯಾಗಿ ಕಾರ್ಯಕ್ರಮ ಜರುಗಲಿದೆ. ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬರುವ ಜನರಿಗೆ ಗದಗ (Gadag) ಜಿಲ್ಲೆಯಿಂದ ಸುಮಾರು ಮೂರೂವರೆ ಲಕ್ಷ ಜೋಳದ ಖಡಕ್ ರೊಟ್ಟಿ, ಸುಮಾರು ಎರಡೂವರೆ ಕ್ವಿಂಟಲ್‌ನಷ್ಟು, ಶೇಂಗಾ, ಕುಸುಬೆ, ಎಳ್ಳು, ಅಗಸಿ ಚಟ್ನಿ ಊಟಕ್ಕೆ ಕಳುಹಿಸಲಾಗುತ್ತಿದೆ. ಗದಗದಿಂದ ಎಲ್ಲವನ್ನೂ ಪ್ಯಾಕ್ ಮಾಡಿ ಸುಮಾರು 4 ಲಾರಿಗಳಲ್ಲಿ ಮೂಡಬಿದರೆಗೆ ಕಳುಹಿಸಲಾಗುತ್ತಿದೆ. ವಿದೇಶಿಗರಿಗೆ ನಮ್ಮ ಆಹಾರ ಪದ್ಧತಿಯ ರೊಟ್ಟಿ, ಚಟ್ನಿ ಉಣಬಡಿಸುವುದು ನಮಗೆ ಸಿಕ್ಕ ಸೌಭಾಗ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹೇಳಿದ್ದಾರೆ.
Advertisement
Advertisement
ಜಿಲ್ಲೆಯ ಎಲ್ಲಾ ತಾಲೂಕಿನ ಶಾಲೆಗಳಿಂದ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಒಟ್ಟಾಗಿ ರೊಟ್ಟಿ, ವಿವಿಧ ತರಹದ ಚಟ್ನಿ ಸಂಗ್ರಹಿಸಿದ್ದಾರೆ. ಜಿಲ್ಲೆಯ ಎಲ್ಲಾ ಭಾಗಗಳಿಂದ ಬಂದ ಲಕ್ಷಾಂತರ ರೊಟ್ಟಿ ಚಟ್ನಿಯನ್ನು ಗದಗ ಎಪಿಎಂಸಿ ದಾಸ್ತಾನು ಕೊಠಡಿಯಲ್ಲಿ ಸಂಗ್ರಹಿಸಲಾಗಿದೆ. ಇದನ್ನು ನೋಡಲು ಜಿಲ್ಲಾಧಿಕಾರಿ ವೈಶಾಲಿ ಎಮ್.ಎಲ್, ಡಿಡಿಪಿಐ ಬಸವಲಿಂಗಪ್ಪ, ಡಯಟ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಶಂಕ್ರಪ್ಪ ಗಾಂಜಿ, ಗದಗ ಹಾಗೂ ಗ್ರಾಮೀಣ ಭಾಗದ ಬಿಇಒಗಳು, ಸಿಬ್ಬಂದಿ ಹಾಗೂ ಸ್ಕೌಟ್ಸ್, ಗೈಡ್ಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ಸುಮಾರು 15 ಲಕ್ಷಕ್ಕೂ ಅಧಿಕ ಮೊತ್ತದ ಆಹಾರ ಖಾದ್ಯ ಇದಾಗಿದೆ. ಸುಮಾರು 3 ತಿಂಗಳು ಇಟ್ಟರೂ ಕೆಡದಂತೆ ಆಹಾರ ಖಾದ್ಯ ಗದಗ ಜಿಲ್ಲೆಯಿಂದ ಕಳುಹಿಸಲಾಗುತ್ತಿದೆ. ಸ್ಕೌಟ್ಸ್ ಆಂಡ್ ಗೈಡ್ಸ್ ಹೊಂದಿರುವ 77 ದೇಶಗಳಿಂದ 50 ರಿಂದ 60 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಅವರಿಗೆಲ್ಲಾ ನಮ್ಮ ಕಲೆ, ಸಂಗೀತ, ಸಾಹಿತ್ಯ, ನಾಟಕ, ಸಂಸ್ಕೃತದ ಜೊತೆಗೆ ಆಹಾರ ಪದ್ಧತಿ ಬಗ್ಗೆ ತಿಳಿಸಲು ಮುಂದಾಗುತ್ತಿರುವುದು ಹೆಮ್ಮೆಯ ವಿಷಯ. ಹಣದ ಬದಲಾಗಿ ಆಹಾರ ರೂಪದಲ್ಲಿ ಸಹಾಯ ಮಾಡುತ್ತಿರುವುದು ಖುಷಿಯ ವಿಚಾರ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟ- ಚೆಕ್ ಮಾಡೋದು ಹೇಗೆ?
Advertisement
ಪ್ರತಿ 4 ವರ್ಷಗಳಿಗೊಮ್ಮೆ ಅಂತಾರಾಷ್ಟ್ರೀಯ ಸ್ಕೌಟ್ಸ್ ಆಂಡ್ ಗೈಡ್ಸ್ ಜಾಂಬೂರಿ ಮೇಳ ನಡೆಯುತ್ತದೆ. 2019 ರಲ್ಲಿ 24ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಆಂಡ್ ಗೈಡ್ಸ್ ಜಾಂಬೂರಿ ಮೇಳ ಉತ್ತರ ಅಮೆರಿಕದ ಪಶ್ಚಿಮ ವರ್ಜಿನಿಯಾದಲ್ಲಿ ನಡೆದಿತ್ತು. ಈಗ 2022 ರಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಮೇಳ ಕರ್ನಾಟಕದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಗದಗ ಜಿಲ್ಲೆಯಿಂದಲೂ ಸುಮಾರು 500 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಕಾರ್ಯಕ್ರಮಕ್ಕೆ 77 ದೇಶಗಳಿಂದ ಬರುವ ವಿದೇಶಿಗರಿಗೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಟ್ನಿ ಕೈರುಚಿ ತೋರಿಸಲು ಜಿಲ್ಲೆಯ ಶಿಕ್ಷಣ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ವಾಸ್ತು ಮೊರೆ ಹೋದ ದಕ್ಷಿಣ ಕನ್ನಡ ಕಾಂಗ್ರೆಸ್