– ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದ ವಿಜ್ಞಾನಿ ದುರಂತ ಅಂತ್ಯ
– ಸಹೋದರನಿಂದ ಮೂತ್ರಪಿಂಡ ದಾನ ಪಡೆದಿದ್ದ ಡಾ.ಸ್ವರ್ಣಕರ್
ಚಂಡೀಗಢ: ಬಾಡಿಗೆ ಮನೆಯ ಬಳಿ ಪಾರ್ಕಿಂಗ್ ವಿಚಾರಕ್ಕೆ ಆಗ ಗಲಾಟೆಯಲ್ಲಿ ನೆರೆ ಮನೆಯವನಿಂದ ಹಲ್ಲೆಗೊಳಗಾಗಿದ್ದ ವಿಜ್ಞಾನಿಯೊಬ್ಬರು ಸಾವಿಗೀಡಾಗಿರುವ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.
ಮೊಹಾಲಿಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (IISER) ಕೆಲಸ ಮಾಡುತ್ತಿದ್ದ ವಿಜ್ಞಾನಿ ಡಾ. ಅಭಿಷೇಕ್ ಸ್ವರ್ಣಕರ್ (39) ಮೃತಪಟ್ಟಿದ್ದಾರೆ. ಇವರು ಸೆಕ್ಟರ್ 67 ರಲ್ಲಿರುವ ಮನೆಯಲ್ಲಿ ಬಾಡಿಗೆಗೆ ಇದ್ದರು. ಮಂಗಳವಾರ ರಾತ್ರಿ ಪಾರ್ಕಿಂಗ್ ವಿಚಾರಕ್ಕೆ ನೆರೆಮನೆಯ ಮಾಂಟಿ ಎಂಬಾತನೊಂದಿಗೆ ಗಲಾಟೆ ನಡೆದು ಹಲ್ಲೆಗೊಳಗಾಗಿದ್ದರು.
ಮೂಲತಃ ಜಾರ್ಖಂಡ್‌ನ ಧನ್ಬಾದ್‌ನವರಾದ ಡಾ. ಸ್ವರ್ಣಕರ್ ಒಬ್ಬ ವಿಶಿಷ್ಟ ವಿಜ್ಞಾನಿಯಾಗಿದ್ದರು. ಅವರ ಕೆಲಸದ ಬಗ್ಗೆ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದರು. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಭಾರತಕ್ಕೆ ಮರಳಿದ್ದರು. IISER ನಲ್ಲಿ ಯೋಜನಾ ವಿಜ್ಞಾನಿಯಾಗಿ ಸೇರಿಕೊಂಡಿದ್ದರು. ವಿಜ್ಞಾನಿಗೆ ಇತ್ತೀಚೆಗೆ ಮೂತ್ರಪಿಂಡ ಕಸಿ ಮಾಡಲಾಗಿತ್ತು. ಅವರ ಸಹೋದರಿ ತನ್ನ ಮೂತ್ರಪಿಂಡಗಳಲ್ಲಿ ಒಂದನ್ನು ದಾನ ಮಾಡಿದ್ದರು. ಸ್ವರ್ಣಕರ್ ಡಯಾಲಿಸಿಸ್‌ನಲ್ಲಿದ್ದರು. ಹಲ್ಲೆಯ ನಂತರ, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಕೊನೆಯುಸಿರೆಳೆದಿದ್ದರು.
ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಜ್ಞಾನಿಯ ಕುಟುಂಬ ಒತ್ತಾಯಿಸಿದೆ. ಮುಂದಿನ ಕ್ರಮ ಕೈಗೊಳ್ಳಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.