ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದ್ದು, ಆತಂಕದಲ್ಲಿರುವ ಜನರು ದೇಶ ತೊರೆದು ಪ್ರಾಣ ಉಳಿಸಿಕೊಳ್ಳುತ್ತಿದ್ದಾರೆ. ತಾಲಿಬಾನಿಗಳ ಪ್ರವೇಶದಿಂದ ಕಾಬೂಲ್ ನಲ್ಲಿ ಶಾಲಾ, ಕಾಲೇಜು ಸೇರಿದಂತೆ ವ್ಯವಹಾರ ಚಟುವಟಿಕೆಗಳು ಬಂದ್ ಆಗಿವೆ. ಆದ್ರೆ ಬುರ್ಖಾ ಅಂಗಡಿಗಳು ತೆರೆದಿದ್ದು, ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ. ಅದರಲ್ಲಿಯೂ ದಪ್ಪ ಬಟ್ಟೆಯ ಬುರ್ಖಾಗಳಿಗೆ ಹೆಚ್ಚು ಬೇಡಿಕೆಯುಂಟಾಗಿದೆ.
2018ರಲ್ಲಿ ಯುನೈಟೆಡ್ ನೇಷನ್ ನಲ್ಲಿ ಅಫ್ಘಾನಿಸ್ತಾನ ಪ್ರತಿನಿಧಿಸಿದ್ದ ಯುವತಿ ಆಯೇಶಾ ಖುರ್ರಮ್ ಈ ಕುರಿತು ಬರೆದುಕೊಂಡಿದ್ದಾರೆ. ತಾಲಿಬಾನಿಗಳ ಎಂಟ್ರಿಯಿಂದಾಗಿ ಬುರ್ಖಾ ವಹಿವಾಟು ಜೋರಾಗಿದ್ದು, ದೇಶದ ವಿವಿಧ ಪ್ರಾಂತ್ಯಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ. ತಾಲಿಬಾನಿಗಳ ದೃಷ್ಟಿ ತಮ್ಮ ಮೇಲೆ ಬೀಳದಿರಲಿ ಎಂದು ಮಹಿಳೆಯರು ದಪ್ಪ ಬಟ್ಟೆ ಮತ್ತು ನೀಲಿ ಬಣ್ಣದ ಬುರ್ಖಾ ಖರೀದಿಗೆ ಮುಂದಾಗುತ್ತಿದ್ದಾರೆ. ಬೇಡಿಕೆ ಹೆಚ್ಚಾದ ಹಿನ್ನೆಲೆ ಮಾರುಕಟ್ಟೆಯಲ್ಲಿ ಬುರ್ಖಾ ಬೆಲೆ ಸಹ ಏರಿಕೆ ಕಂಡಿದೆ. ಈ ಹಿಂದೆ ತಾಲಿಬಾನಿಗಳ ನಲುಗಿದ ಮಹಿಳೆಯರು ಎಲ್ಲ ಯುವತಿಯರಿಗೆ ಬುರ್ಖಾ ಧರಿಸುವಿಕೆಯ ಸಲಹೆ ನೀಡುತ್ತಿದ್ದಾರೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ
22 ವರ್ಷದ ಆಯೇಶಾ ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ವ್ಯವಹಾರಿಕ ಸಂಬಂಧಗಳ ಕುರಿತ ವಿಷಯದ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಂತಿಮ ವರ್ಷದ ಪರೀಕ್ಷೆಗೆ ಇನ್ನೂ ಎರಡು ತಿಂಗಳು ಇರುವಾಗಲೇ ತಾಲಿಬಾನಿಗಳ ಪ್ರವೇಶವಾಗಿದೆ. ನಾನು ಪದವಿ ಪಡೆಯುವ ಕನಸು ಕನಸಾಗಿಯೇ ಉಳಿಯಲಿದೆ ಎಂದು ಆಯೇಶಾ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ನಾಲ್ಕು ಕಾರ್, ಒಂದು ಹೆಲಿಕಾಪ್ಟರ್ ನಲ್ಲಿ ನಗದು ಹೊತ್ತೊಯ್ದ ಅಶ್ರಫ್ ಘನಿ
ಇನ್ನೂ ಕೆಲ ದಿಟ್ಟ ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ತಾಲಿಬಾನಿಗಳಿಗೆ ತಲುಪಿಸುವ ಪ್ರಯತ್ನದಲ್ಲಿದ್ದಾರೆ. ಕಾಬೂಲ್ ವಿಶ್ವವಿದ್ಯಾಲಯದ ಅಧ್ಯಾಪಕಿ ಮುಸ್ಕಾ ದಸ್ತಗೀರ್ ಸೋಶಿಯಲ್ ಮೀಡಿಯಾದಲ್ಲಿ ತಾಲಿಬಾನಿಗಳನ್ನು ಉದ್ದೇಶಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಜನರನ್ನ ಬೇಟೆಯಂತೆ ಕಂಡು ಕೊಲ್ಲಲಾಗುತ್ತಿದೆ. ಆದ್ರೆ ಈ ದೇಶದ ಮಹಿಳೆಯರು ಮನೆಯಲ್ಲಿ ಅವಿತುಕೊಳ್ಳಲ್ಲ ಮತ್ತು ನಾವುಗಳು ಹೆದರಲ್ಲ ಎಂದು ಬರೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳಿಗೆ ಹೆದರಿ 1 ವಿಮಾನದಲ್ಲಿ ಪ್ರಯಾಣಿಸಲು ಮುಗಿಬಿದ್ದ ನೂರಾರು ಜನ