ಶಿವಮೊಗ್ಗ: ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ನದಿಗಳು- ಹಳ್ಳ-ಕೊಳ್ಳಗಳು ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಶಿಥಿಲಾವಸ್ಥೆಯಲ್ಲಿರುವ ಮನೆ, ಕಟ್ಟಡಗಳಲ್ಲಿರುವ ವಾಸ್ತವ್ಯ ಸ್ಥಳಾಂತರಿಸಬೇಕು. ಕಾಲುಹಾದಿ, ಕಾಲು ಸಂಕ, ಹರಿಯುವ ನೀರಿನ ಬದಿಗಳಲ್ಲಿ ನಡೆಯುವ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. ಸಣ್ಣ ಮಕ್ಕಳನ್ನು ಅಂತಹ ಸ್ಥಳಗಳಿಗೆ ಒಬ್ಬಂಟಿಯಾಗಿ ಕಳುಹಿಸಬಾರದು. ಅತಿ ಹೆಚ್ಚು ಮಳೆಯಾಗುತ್ತಿರುವ ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಕ್ಕಳು ಆದಷ್ಟು ಮನೆಯೊಳಗೆ ಸುರಕ್ಷಿತವಾಗಿರಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.
Advertisement
ಜಿಲ್ಲೆಯ ನದಿಗಳಾದ ತುಂಗ-ಭದ್ರಾ, ಮಾಲತಿ, ಶರಾವತಿ ನದಿಗಳಲ್ಲಿ ನೀರಿನ ಹರಿವು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿದೆ. ತೀರ್ಥಹಳ್ಳಿಯ ತಗ್ಗು ಪ್ರದೇಶದ ಗದ್ದೆಗಳಲ್ಲಿ ನೀರು ನಿಂತಿದೆ. ಇದೇ ಮಳೆ ಪ್ರಮಾಣ ಮುಂದುವರೆದಲ್ಲಿ ತೀವ್ರ ಹಾನಿ ಸಾಧ್ಯತೆ ಹೆಚ್ಚಾಗಿದೆ.