ಭೋಪಾಲ್: 400 ಮಂದಿ ಮಕ್ಕಳ ಪ್ರಾಣವನ್ನು ರಕ್ಷಿಸಲು ಕಾನ್ಸ್ಟೇಬಲ್ ಒಬ್ಬರು 10 ಕೆಜಿ ತೂಕದ ಬಾಂಬ್ ಅನ್ನು ಹೊತ್ತುಕೊಂಡು 1 ಕಿ.ಮೀ ಓಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಅಭಿಷೇಕ್ ಪಟೇಲ್ ಬಾಂಬ್ ಹೊತ್ತುಕೊಂಡು ಓಡಿದ ಪೊಲೀಸ್ ಪೇದೆ. ಶುಕ್ರವಾರ ಚಿತೋರ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
Advertisement
ಆಗಿದ್ದೇನು?
ಚಿತೋರಾದಲ್ಲಿರುವ ಸರ್ಕಾರಿ ಶಾಲೆಯ ಬಳಿ ಶುಕ್ರವಾರ ಬಾಂಬ್ ಪತ್ತೆಯಾಗಿತ್ತು. ಶಾಲಾ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದು ಪೊಲೀಸರ ಜೊತೆ ಪಟೇಲ್ ಸ್ಥಳಕ್ಕೆ ಆಗಮಿಸಿದ್ದಾರೆ.
Advertisement
ಬಾಂಬ್ ನೋಡಿದ ಕೂಡಲೇ ಪೊಲೀಸರು ಶಾಲೆಯನ್ನು ಮುಚ್ಚುವಂತೆ ಹೇಳಿದರು. ಈ ವೇಳೆ ಬಾಂಬ್ ನಿಷ್ಕ್ರಿಯ ದಳ ಸಹ ಸ್ಥಳಕ್ಕೆ ಆಗಮಿಸಿರಲಿಲ್ಲ. ವಿಚಾರ ತಿಳಿದು ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿದವು. ಈ ಸಂದರ್ಭದಲ್ಲಿ ಎಲ್ಲರೂ ನೋಡುತ್ತಿದ್ದಂತೆ 40 ವರ್ಷದ ಅಭಿಷೇಕ್ ಪಟೇಲ್ 12 ಇಂಚು ಉದ್ದ ಹಾಗೂ 10ಕೆ.ಜಿ ತೂಕದ ಬಾಂಬನ್ನು ಹೊತ್ತುಕೊಂಡು ಓಡಲು ಆರಂಭಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದ ಪ್ರತಿನಿಧಿಯೊಬ್ಬರು ವಿಡಿಯೋ ಸೆರೆ ಹಿಡಿದಿದ್ದು, ಈಗ 12 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಓಡಿದ್ದು ಯಾಕೆ?
100 ಸಂಖ್ಯೆಗೆ ಕರೆ ಬಂದ ಹಿನ್ನೆಲೆಯಲ್ಲಿ ನಾವು ಶಾಲೆಗೆ ಬಂದೆವು. ಕೆಲ ತಿಂಗಳ ಹಿಂದೆ ನಡೆದ ಪೊಲೀಸ್ ಆಪರೇಷನ್ ತರಬೇತಿ ಸಮಯದಲ್ಲಿ ಬಾಂಬ್ ಸಿಡಿದರೆ ಸುಮಾರು 500 ಮೀಟರ್ ವ್ಯಾಪ್ತಿಯ ಪ್ರದೇಶಗಳಿಗೆ ಹಾನಿ ಆಗುತ್ತದೆ ಎಂದು ತಿಳಿಸಿದ್ದರು. ಹೀಗಾಗಿ ಮಕ್ಕಳ ಪ್ರಾಣವನ್ನು ಉಳಿಸಲು ನಾನು ಬಾಂಬ್ ಅನ್ನು ಹಿಡಿದುಕೊಂಡು ಒಂದು ಕಿ.ಮೀ ದೂರದವರೆಗೆ ಓಡಿ ಎಸೆದು ಬಂದೆ ಎಂದು ಅಭಿಷೇಕ್ ಪಟೇಲ್ ತಿಳಿಸಿದ್ದಾರೆ.
Advertisement
ಕೆಲ ದಿನಗಳ ಹಿಂದೆ ಈ ಪ್ರದೇಶದ ಸಮೀಪವೇ ಬಾಂಬ್ ಪತ್ತೆಯಾಗಿತ್ತು. ಈ ಬಾಂಬ್ ಈ ಸ್ಥಳಕ್ಕೆ ಹೇಗೆ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಶಾಲೆ ಇರುವ ಗ್ರಾಮದಲ್ಲೇ ಸೇನೆ ಶೂಟಿಂಗ್ ನಡೆಸುವ ಸ್ಥಳವಿದೆ. ಈ ಪ್ರಕರಣ ಸಂಬಂಧ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಸತೀಶ್ ಸಕ್ಸೇನಾ ತಿಳಿಸಿದ್ದಾರೆ.