ಬೆಂಗಳೂರು : ಕನ್ನಡ ಭಾಷೆಯನ್ನು ಕಲಿಸದ ಖಾಸಗಿ ಶಾಲೆಗಳು, ಸಿಬಿಎಸ್‍ಸಿ, ಐಸಿಎಸ್‍ಸಿ, ಕೇಂದ್ರೀಯ ವಿದ್ಯಾಲಯದ ಶಾಲೆಗಳಿಗೆ ಸಚಿವ ಸುರೇಶ್ ಕುಮಾರ್ ಕೊನೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಿಬಿಎಸ್‍ಸಿ, ಐಸಿಎಸ್‍ಸಿ, ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಭಾಷೆ ಕಲಿಕಾ ಕಾಯ್ದೆ ಅನುಷ್ಠಾನ ಕುರಿತ ಸಂವಾದದಲ್ಲಿ ಮಾತನಾಡಿದ ಸಚಿವರು, ಕಾವೇರಿ ನೀರು ಕುಡಿದ ಮೇಲೆ ಕನ್ನಡ ಕಲಿಬೇಕು, ಕನ್ನಡದಲ್ಲಿ ಮಾತಾಡಬೇಕು. ಕನ್ನಡವನ್ನು ಅಕ್ಕರೆಯಿಂದ ಕಲಿಸಬೇಕು ಅಂತ ಮನವಿ ಮಾಡಿದ್ರು. ಕೆಲವು ಶಾಲೆಗಳಲ್ಲಿ ಕನ್ನಡ ಕಲಿಸೋದು ಕೀಳು ಅಂತ ಭಾವಿಸಿದ್ದಾರೆ. ಕೆಲ ಶಾಲೆಯಲ್ಲಿ ಕನ್ನಡ ಶಿಕ್ಷಕರೇ ಇರೋದಿಲ್ಲ. ಕನ್ನಡ ಕಲಿಸದೇ ಇರೋದನ್ನ ಸರ್ಕಾರ ಸಹಿಸೊಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ.
2015 ರಲ್ಲಿ ಸರ್ಕಾರ ಕಾಯ್ದೆ ಜಾರಿಗೆ ತಂದಿದೆ. 2017ರಿಂದ ರಾಜ್ಯದಲ್ಲಿ ಕಾಯ್ದೆ ಅನುಷ್ಠಾನವಾಗಿದೆ. ಆದ್ರೆ ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು, ಸಿಬಿಎಸ್‍ಸಿ, ಐಸಿಎಸ್‍ಸಿ, ಕೆ.ವಿ.ಶಾಲೆಗಳಲ್ಲಿ ಕನ್ನಡ ಕಲಿಸುತ್ತಿಲ್ಲ. ಹೀಗಾಗಿ ಈಗ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶಾಲೆಗಳಿಗೆ ಜಾಗೃತಿ ಜೊತೆಗೆ ಎಚ್ಚರಿಕೆ ಕೊಡೋ ಕೆಲಸ ಮಾಡಿದೆ. ಆಡಳಿತ ಮಂಡಳಿಗಳ ಜೊತೆ ಚರ್ಚೆ ಮಾಡಿ ಕಾಯ್ದೆ ಅನುಷ್ಠಾನಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದೆ.
2017ರ ಕಾಯ್ದೆ ಪ್ರಕಾರ ಕಡ್ಡಾಯವಾಗಿ ಎಲ್ಲಾ ಶಾಲೆಗಳು ಕನ್ನಡ ಭಾಷೆಯನ್ನು ಕಲಿಸಲೇಬೇಕು. ಅದರಲ್ಲೂ ಮೊದಲ ವಿಷಯ ಅಥವಾ ಎರಡನೇ ವಿಷಯವಾಗಿ ಕನ್ನಡ ಭಾಷೆ ಕಲಿಸಬೇಕು. ಬೇರೆ ರಾಜ್ಯದಿಂದ ಅರ್ಧಕ್ಕೆ ಓದಲು ಬರೋ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದನೇ ತರಗತಿಯಿಂದ ಕನ್ನಡ ಭಾಷೆ ಓದಬೇಕು ಅಂತ ನಿಯಮ ರೂಪಿಸಲಾಗಿದೆ. ನಿಯಮ ಪಾಲನೆ ಮಾಡದೇ ಇದ್ದರೆ ದಂಡ ಹಾಕುವ, ಶಾಲೆಗಳ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಸರ್ಕಾರಕ್ಕೆ ಇದೆ.