ಗದಗ: ಶಾಲೆಯಿಂದ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿಯ ಸೈಕಲಿಗೆ ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ದೊಡ್ಡಬೀರಪ್ಪ ಒಡ್ಡಟ್ಟಿ(14) ಎಂದು ಗುರುತಿಸಲಾಗಿದೆ. ಇಂದು ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ವಿದ್ಯಾರ್ಥಿ ತನ್ನ ಸೈಕಲಿನಲ್ಲಿ ಬರುತ್ತಿದ್ದನು. ಈ ವೇಳೆ ಹಮ್ಮಿಗಿ ಗ್ರಾಮದ ಬಳಿ ವೇಗದಿಂದ ಬಂದ ಸರ್ಕಾರಿ ಬಸ್ ಡಿಕ್ಕಿ ಹೊಡಿದ ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಪಘಾತ ನಡೆದ ತಕ್ಷಣ ಹೆದರಿದ ಚಾಲಕ ಬಸ್ ನಿಲ್ಲಿಸಿ ಪರಾರಿಯಾಗಿದ್ದಾನೆ.
ಈ ಬಸ್ಸು ಮುಂಡರಗಿಯಿಂದ ಹಮ್ಮಿಗಿ ಗ್ರಾಮಕ್ಕೆ ಬರುತಿತ್ತು. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮುಂಡರಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.