ಹಾಸನ: ಚನ್ನಪಟ್ಟಣದಲ್ಲಿರುವ ಶಾಲಾ ಕಟ್ಟಡವೊಂದು ಭಾರೀ ಮಳೆಗೆ ಕುಸಿದು ಬಿದ್ದಿದ್ದು, ಶಾಲೆಗೆ ರಜೆ ಕೊಟ್ಟ ಕಾರಣಕ್ಕೆ ಭಾರೀ ಅನಾಹುತವೊಂದು ತಪ್ಪಿದೆ.
ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಚನ್ನಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡದ ಗೋಡೆ ಕುಸಿದು ಬಿದ್ದಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಒಂದು ವೇಳೆ ರಜೆ ನೀಡದೇ ಇದ್ದಲ್ಲಿ ಜೀವ ಅಪಾಯಕ್ಕೆ ಅಪಾಯವಾಗುವ ಸಾಧ್ಯತೆ ಇತ್ತು. ಗೋಡೆಯ ಜೊತೆಗೆ ಅರ್ಧ ಮಹಡಿ ಸಹ ನೆಲಕ್ಕೆ ಬಿದ್ದಿದೆ.
ಮಳೆಯ ಆರ್ಭಟಕ್ಕೆ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂ ಕುಸಿತಗೊಂಡಿದೆ. ಹಾಸನ ಸಕಲೇಶಪುರ ತಾಲೂಕಿನ ಆನೆಮಹಲ್ ಬಳಿ ಭೂಮಿ ಕುಸಿದಿದೆ. ಈ ವೇಳೆ ಮಣ್ಣಿನ ನಡುವೆ ಸಿಲುಕಿ ಒಂದು ಕಾರು ಜಖಂಗೊಂಡಿದೆ. ಹಾಗೆಯೇ ಹೆದ್ದಾರಿಯ ಎತ್ತಿನಹಳ್ಳದ ಬಳಿ ಕೂಡ ಗುಡ್ಡ ಕುಸಿದಿದ್ದು, ಈ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣಿನ ರಾಶಿಯಿಂದ ವಾಹನಗಳು ಸಾಲುಗಟ್ಟಿ ನಿಂತ್ತಿದ್ದು, ಸವಾರರು ಪರೆದಾಡುತ್ತಿದ್ದಾರೆ.
ನಿರಂತರವಾಗಿ ಸುರಿಯುತ್ತಿರೋ ಮಳೆ ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಇತ್ತ ಆನೆಮಹಲ್ ಭಾಗದಲ್ಲಿ ನಾಲ್ಕು ಮನೆಗಳು ಕುಸಿಯುವ ಸಾಧ್ಯತೆಯಿದ್ದು, ಅಪಾಯದ ಅಂಚಿನಲ್ಲಿರೋ ನಾಲ್ಕು ಮನೆಗಳ 10ಕ್ಕೂ ಹೆಚ್ಚು ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.