ಬೆಳಗಾವಿ: ಸೈಕಲಿನಲ್ಲಿ ಶಾಲೆಗೆ ಹೊರಟಿದ್ದ ಬಾಲಕ ಆಯತಪ್ಪಿ ನದಿಗೆ ಬಿದ್ದು, ನೀರುಪಾಲಾಗಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ಸುನದೋಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಸವರಾಜ್ ನೀರುಪಾಲದ ಬಾಲಕ. ಬಸವರಾಜ್ ಇಂದು ಸೈಕಲ್ ಮೇಲೆ ಶಾಲೆಗೆ ಹೊರಟ್ಟಿದ್ದನು. ಘಟಪ್ರಭಾ ನದಿಯ ಸೇತುವೆ ಮೇಲೆ ಹೋಗುವಾಗ ಎದುರುಗಡೆಯಿಂದ ವಾಹನವೊಂದು ಬರುತ್ತಿತ್ತು. ಈ ವೇಳೆ ವಾಹನದಿಂದ ತಪ್ಪಿಸಿಕೊಳ್ಳಲು ಸೈಕಲ್ ನನ್ನು ಪಕ್ಕಕ್ಕೆ ತೆಗೆದುಕೊಳ್ಳಲು ಹೋಗಿದ್ದಾನೆ. ಆಗ ಆಯ ತಪ್ಪಿ ಘಟಪ್ರಭಾ ನದಿಗೆ ಸೈಕಲ್ ಸಮೇತ ಬಿದ್ದಿದ್ದಾನೆ.
ಬಾಲಕ ಬಿದ್ದ ತಕ್ಷಣ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಕುಲಗೋಡ ಪೊಲೀಸರು ಸ್ಥಳಕ್ಕೆ ದೌಡಾಯಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ಅಗ್ನಿಶಾಮಕ ದಳ ಸಿಬ್ಬಂದಿ ಬಾಲಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಘಟಪ್ರಭಾ ಸೇತುವೆಗೆ ತಡೆಗೋಡೆ ಇಲ್ಲದ್ದರಿಂದ ಈ ಅವಘಡ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.