ಮೈಸೂರು: ಶಾಲಾ ಶುಲ್ಕ ಕಟ್ಟಲಿಲ್ಲ ಅಂತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ ಶಾಲಾ ಕೊಠಡಿಯಲ್ಲಿಯೇ ಕೂಡಿ ಹಾಕಿದ್ದ ಅಮಾನವೀಯ ಘಟನೆ ಜಿಲ್ಲೆಯ ಪಿರಿಯಾಪಟ್ಟಣದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಪಿರಿಯಾಪಟ್ಟಣದ ಬಸವೇಶ್ವರ ಕಾನ್ವೆಂಟ್‍ನಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಫೀಸ್ ಕಟ್ಟದಿದ್ದಕ್ಕೆ ಮಕ್ಕಳನ್ನ ಕೂಡಿ ಹಾಕಿ, ಪೋಷಕರು ಬರುವವರೆಗೂ ಮನೆಗೆ ಕಳುಹಿಸಲ್ಲ ಎಂದು ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ಹೆದರಿಸಿದ್ದಾರೆ. 6, 8, 9 ಸಾವಿರ ರೂ. ಹೀಗೆ ತರಹಾವರಿ ಫೀಸ್ ಕಟ್ಟಬೇಕಿದ್ದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶುಲ್ಕ ಪಾವತಿಸಿರಲಿಲ್ಲ. ಆದರಿಂದ ಸುಮಾರು 8ರಿಂದ 10 ಮಕ್ಕಳನ್ನು ಒಂದೇ ರೂಮಿನಲ್ಲಿ ಕೂಡಿ ಹಾಕಲಾಗಿತ್ತು.
ಬೆಳಗ್ಗೆ ಶಾಲೆಗೆ ಬಂದ ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೂ ಬಿಡದೇ ಕೂಡಿ ಹಾಕಲಾಗಿತ್ತು. ಬಳಿಕ ವಿಚಾರ ತಿಳಿದ ಮೇಲೆ ಶಾಲೆಗೆ ಸ್ಥಳಿಯರು ಬಂದು ಮಕ್ಕಳನ್ನು ಕೊಠಡಿಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ. ಶಾಲಾ ಆಡಳಿತ ಮಂಡಳಿಯ ಈ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಬಿಇಓ ಹಾಗೂ ಸ್ಥಳೀಯ ಶಾಸಕರಿಗೆ ದೂರು ನೀಡಿದ್ದಾರೆ.