Connect with us

Districts

ಬೇಸಿಗೆ ಮುನ್ನವೇ ಜೀವಜಲಕ್ಕಾಗಿ ಹಾಹಾಕಾರ

Published

on

ಕೊಪ್ಪಳ: ಬೇಸಿಗೆ ಕಾಲದ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಿಲ್ಲೆಯ ಗ್ರಾಮವೊಂದರಲ್ಲಿ ಕಳೆದ 15 ದಿನಗಳಿಂದ ನೀರು ಬಾರದ ಕಾರಣ ಗ್ರಾಮಸ್ಥರು ಹೊಲದಲ್ಲಿರುವ ಕೃಷಿಹೊಂಡಗಳ ನೀರನ್ನು ಕುಡಿದು ಬದುಕು ಸಾಗಿಸುತ್ತಿದ್ದಾರೆ.

ಜಿಲ್ಲೆಯ ಕುಕನೂರು ತಾಲೂಕಿನ ಭಟಪ್ಪನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಬೋರ್ ವೇಲ್ ನೀರು ಸ್ಥಗಿತಗೊಂಡ ಕಾರಣ, ಗ್ರಾಮಸ್ಥರು ದೂರದಲ್ಲಿರುವ ಕೃಷಿ ಹೊಂಡಗಳಿಗೆ ಹೋಗಿ ನೀರು ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮಂಡಲಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಜನತೆಗೆ ನೀರು ಪೂರೈಕೆ ಮಾಡಬೇಕಾದ ಗ್ರಾ.ಪಂಯವರು 15 ದಿನಗಳಾದರೂ ಮಷಿನ್ ದುರಸ್ತಿಗೊಳಿಸಿಲ್ಲ. ಪರಿಣಾಮ ಈ ಗ್ರಾಮಸ್ಥರು ಬೆಳಗ್ಗೆಯಿಂದ ಸಂಜೆ ತನಕ ಹೊಲದಲ್ಲಿ ನಿರ್ಮಿಸಿರುವ ರೈತರ ಕೃಷಿಹೊಂಡಗಳನ್ನು ಹುಡುಕಿಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮೈಲುಗಟ್ಟಲೇ ನಡೆದು ಹೋದರೆ ಮಾತ್ರ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ಪಂಪ್‍ಸೆಟ್ ಕಳೆದ 15 ದಿನಗಳ ಹಿಂದೆ ಕೈಕೊಟ್ಟಿದೆ. ಇಂದು ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಗ್ರಾಮಸ್ಥರು ದೊಡ್ಡ ಮನಸ್ಸು ಮಾಡಿ, ಮೈಲುಗಟ್ಟಲೇ ನಡೆದುಕೊಂಡು ಹೋಗಿ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನೇ ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ಆದರೆ ಗ್ರಾ.ಪಂ.ಯವರು ಮಾತ್ರ ಇದುವರೆಗೂ ಮಷಿನ್ ರಿಪೇರಿ ಮಾಡಿಸಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮದ ಮತ್ತೊಬ್ಬರು ಹೇಳುವ ಪ್ರಕಾರ, ಮಷಿನ್ ರಿಪೇರಿ ಮಾಡಿಸಿದ್ದಾರೆ. ಆದರೆ ಪೈಪ್‍ಲೈನ್ ಒಡೆದು ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ನಮ್ಮ ಊರಿಗೆ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿ ನೀರು ತರಬೇಕು. ದೂರದಲ್ಲಿರುವ ಕೃಷಿಹೊಂಡಗಳಿಗೆ ಸುಡು ಬಿಸಿಲಿನಲ್ಲಿ ನಡೆದುಕೊಂಡು ಹೋಗಿ ತಲೆ ಮೇಲೆ ಕೊಡ ಹೊತ್ತುಕೊಂಡು ವಿದ್ಯಾರ್ಥಿಗಳು ನೀರು ತರುತ್ತಿರುವ ದೃಶ್ಯವಂತೂ ಪ್ರಜ್ಞಾವಂತರ ಕರಳು ಕಿತ್ತು ಬರುವುಂತಿದೆ. ತುಂಬಿದ ಕೊಡಗಳನ್ನು ಹೊತ್ತುಕೊಂಡು ಪುಟ್ಟಪುಟ್ಟ ಮಕ್ಕಳು ನಡುರಸ್ತೆಯಲ್ಲಿ ಭಾರವನ್ನು ತಾಳದೇ ಮುಖ ಕಿವಿಚಿಕೊಂಡು ಮನೆ ಕಡೆ ದಾವಿಸುತ್ತಿರುವಾಗ, ಜನಪ್ರತಿನಿಧಿಗಳ ಹಾಗೂ ಗ್ರಾ.ಪಂ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ನೀರಿನ ರಾಜಕೀಯಕ್ಕೆ ಹೆಸರಾದ ತಾಲೂಕು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಲಬುರ್ಗಾ ವಿಧಾನಸಭಾ ಕ್ಷೇತ್ರವು ನೀರು ಮತ್ತು ನೀರಾವರಿ ರಾಜಕೀಯಕ್ಕೆ ಹೆಸರಾಗಿದೆ. ಇಲ್ಲಿನ ರಾಜಕಾರಣಿಗಳು ಪ್ರತಿ ಚುನಾವಣೆಯಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಅಸ್ತಂಗಳನ್ನು ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಆದರೆ ಈ ಕ್ಷೇತ್ರದ ಜನರಿಗೆ ಮಾತ್ರ ಶಾಶ್ವತವಾಗಿ ನೀರಾವರಿ ಸೌಲಭ್ಯವೂ ಕಲ್ಪಿಸಿಲ್ಲ. ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ಭರವಸೆಯಲ್ಲಿಯೇ ಬೆಂದು ಹೋಗುತ್ತಿರುವ ಜನ ಗ್ರಾ.ಪಂಯಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರವರೆಗೂ ಜಿಲ್ಲೆಯ ಜನತೆಗೆ ಪ್ರತಿ ವರ್ಷ ಭರವಸೆಗಳನ್ನು ಕೊಟ್ಟು, ನಿಮ್ಮೂರಿನ ರೈತರಿಗೆ ನೀರಿವಾರಿ ಸೌಲಭ್ಯ ಕಲ್ಪಿಸ್ತಿವಿ. ನಿಮ್ಮೂರಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುತ್ತೇವೆ. ಹಾಗೇ ಹೀಗೇ ಎಂದು ಕೇವಲ ಭರವಸೆಗಳನ್ನೇ ಕೊಟ್ಟು ಈ ಭಾಗದ ಜನರನ್ನು ಭರವಸೆಯಲ್ಲಿಯೇ ಬೆಂದು ಹೋಗುವುಂತೆ ಮಾಡಿದ್ದಾರೆ. ತುಂಗಭದ್ರಾ ಹಿನ್ನೀರಿನಿಂದ ಬನ್ನಿಕೊಪ್ಪ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ನಾರಾಯಣಪುರ ಜಲಾಶಯದಿಂದ ಈ ಗ್ರಾಮಗಳಿಗೆ ತಲುಪಬೇಕಾಗಿದ್ದ 762 ಕೋಟಿ ರೂ. ವೆಚ್ಚದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಲ್ಲದೇ ಈ ಗ್ರಾಮದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗಿ ವರ್ಷ ಕಳೆದರೂ ಇದುವರೆಗೂ ಈ ಘಟಕವನ್ನು ರಿಪೇರಿ ಮಾಡಿಲ್ಲ ಎಂದು ಗ್ರಾಮಸ್ಥರಾದ ಮಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಕಾರಣ ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಯಿಂದ ಕೃಷಿ ಹೊಂಡಗಳಲ್ಲಿ ಸಂಗ್ರಹಗೊಂಡ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. 15 ದಿನಗಳಿಂದ ಇದೇ ನೀರನ್ನು ಕುಡಿಯುತ್ತಿರುವ ಈ ಗ್ರಾಮಸ್ಥರು, ಆರೋಗ್ಯದಲ್ಲಿ ಏರುಪೇರಾದರೆ ಜವಾಬ್ದಾರರು ಯಾರು ಎನ್ನುವ ಪ್ರಶ್ನೆಗೆ ಕೇವಲ ಗ್ರಾ.ಪಂ. ಮಾತ್ರವಲ್ಲ ಇಡೀ ಜಿಲ್ಲಾಡಳಿತವೇ ಉತ್ತರಿಸಬೇಕಾಗುತ್ತದೆ.

Click to comment

Leave a Reply

Your email address will not be published. Required fields are marked *