ವಾಲ್ಮೀಕಿ ನಿಗಮದಂತೆ ಪ್ರವಾಸೋದ್ಯಮ ಇಲಾಖೆಯಲ್ಲೂ ಗೋಲ್ಮಾಲ್‌ – 2.47 ಕೋಟಿ ರೂ. ಅಕ್ರಮ ಹಣ ವರ್ಗಾವಣೆ

Public TV
3 Min Read
Scam in Bagalkot tourism department 1

– ಕಳೆದ ಅಕ್ಟೋಬರ್‌ 28 ರಿಂದ ಈ ಫೆಬ್ರವರಿ 22 ರವರೆಗೆ ವರ್ಗಾವಣೆ
– 3 ಖಾತೆಯಿಂದ ಒಟ್ಟು 54 ಬಾರಿ ವರ್ಗಾವಣೆ
– ನಿರ್ಮಿತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಗೂ ದುಡ್ಡು

ಬಾಗಲಕೋಟೆ: ರಾಜ್ಯದಲ್ಲಿ ವಾಲ್ಮೀಕಿ ನಿಗಮದ ಹಗರಣ (Valmiki Scam) ಸರ್ಕಾರದ ಕೊರಳಿಗೆ ಕುಣಿಕೆಯಾಗುತ್ತಿದೆ. ಈಗಾಗಲೇ ಸಚಿವ ಬಿ. ನಾಗೇಂದ್ರ (Nagendra) ತಲೆದಂಡ ಕೂಡ ಆಗಿದ್ದು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಇದರ ಮಧ್ಯೆ ಅದೇ ಮಾದರಿಯಲ್ಲಿ ಮತ್ತೊಂದು ಇಲಾಖೆಗೆ ಸಂಬಂಧಿಸಿದ ಬ್ಯಾಂಕ್ ಖಾತೆಯಲ್ಲಿ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.

ಬಾಗಲಕೋಟೆ (Bagalkot) ಜಿಲ್ಲಾ ಪ್ರವಾಸೋದ್ಯಮ (Tourism Department) ಇಲಾಖೆಯಲ್ಲಿ 2,47,73,999 ರೂ. ವಂಚನೆಯಾಗಿದ್ದು, ಬಾಗಲಕೋಟೆ ಐಡಿಬಿಐ ಬ್ಯಾಂಕ್‌ ಖಾತೆಗಳ ಮೂಲಕ ಹಣ ವಿವಿಧ ಖಾತೆಗೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದಂತೆ ಜುಲೈ 11 ರಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಅಕ್ರಮ ವ್ಯವಹಾರಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Scam in Bagalkot tourism department 3

ವಂಚನೆ ಹೇಗೆ?
ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು ಮೂರು ಖಾತೆಗಳನ್ನು ಬಾಗಲಕೋಟೆ ಐಡಿಬಿಐ ಬ್ಯಾಂಕ್‌ನಲ್ಲಿ (IDBI) ನಿರ್ವಹಣೆ ಮಾಡಲಾಗುತ್ತಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರ (ಹೆಡ್‌) ಹೆಸರಲ್ಲಿ ಐಡಿಬಿಐ ಬ್ಯಾಂಕ್ ನಲ್ಲಿ ಖಾತೆ ತೆರೆಯಲಾಗಿದೆ. ಮೂರು ಬ್ಯಾಂಕ್‌ ಖಾತೆಯಿಂದ ಕಳೆದ ಅಕ್ಟೋಬರ್‌ 28 ರಿಂದ ಈ ಫೆಬ್ರವರಿ 22 ರವರೆಗೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಇದನ್ನೂ ಓದಿ: ಅನಂತ್‌ ಅಂಬಾನಿ ವಿವಾಹ ಮಹೋತ್ಸವದಲ್ಲಿ ಮೋದಿ ಭಾಗಿ – ನವ ಜೋಡಿಗೆ ಆಶೀರ್ವದಿಸಿದ ಪ್ರಧಾನಿ!

Scam in Bagalkot tourism department 2

ಯಾವ ಖಾತೆಯಿಂದ ಎಷ್ಟು?
1071104000160063 ಖಾತೆ ಮೂಲಕ 1,35,96,500 ರೂ., 1071104000165228 ಮೂಲಕ 1,01,33,750 ರೂ., ಮೂರನೇ ಖಾತೆ 1071104000165501 ಯಿಂದ 10,43,749 ರೂ. ಹಣ ವರ್ಗಾವಣೆಯಾಗಿದೆ. ಒಂದು ಖಾತೆಯಿಂದ 28 ಬಾರಿ, ಮತ್ತೊಂದು ಖಾತೆಯಿಂದ 25 ಬಾರಿ, ಮೂರನೇ ಖಾತೆಯಿಂದ ಒಂದು ಬಾರಿ ಸೇರಿ ಒಟ್ಟು 54 ಬಾರಿ ಹಣ ವರ್ಗಾವಣೆಯಾಗಿದೆ.

ಪ್ರವಾಸೋದ್ಯಮ ಇಲಾಖೆ ಅನುಮತಿಯಿಲ್ಲದೆ, ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಇಲಾಖೆಗೆ ಸಂಬಂಧಿಸಿದ ಹಣವನ್ನು ಆರೋಪಿಗಳು ತಮಗೆ ಬೇಕಾದ ರೀತಿಯಲ್ಲಿ ವರ್ಗಾವಣೆ ಮಾಡಿದ್ದಾರೆ. ಇಲಾಖೆಯ ಹಣ ತೆಗೆದುಕೊಂಡು ಸರಕಾರಕ್ಕೆ ಮೋಸ ಮಾಡಿದ್ದಾರೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಇನ್ನು ಮುಂದೆ ಕ್ರೆಡಿಟ್‌ ಕಾರ್ಡ್‌ನಂತೆ ಯುಪಿಐ ಬಳಸಿ- ಇದು ಹೇಗೆ ಕೆಲಸ ಮಾಡುತ್ತೆ?

bagalkot sp amarnath reddy
ಬಾಗಲಕೋಟೆ ಎಸ್‌ಪಿ  ಅಮರನಾಥ ರೆಡ್ಡಿ

ಎಸ್‌ಪಿ ಹೇಳಿದ್ದೇನು?
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಾಗಲಕೋಟೆ ಎಸ್‌ಪಿ  ಅಮರನಾಥ ರೆಡ್ಡಿ, ಪ್ರವಾಸೋದ್ಯಮ ಇಲಾಖೆಯ ಖಾತೆಯಿಂದ ನಿರ್ಮಿತಿ ಕೇಂದ್ರ, ಸಮಾಜ ಕಲ್ಯಾಣ ಇಲಾಖೆಗೂ ದುಡ್ಡು ಹೋಗಿದೆ. ಹಣ ವರ್ಗಾವಣೆ ಬಗ್ಗೆ ಐಡಿಬಿಐ ಬ್ಯಾಂಕ್ ಬಳಿಯೂ ದಾಖಲೆ ಇಲ್ಲ. ಯಾರು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವುದು ತನಿಖೆ ನಂತರ ಗೊತ್ತಾಗಲಿದೆ. ಒಂದು ತಂಡ ರಚಿಸಿ ತನಿಖೆ ನಡೆಸಿದ್ದೇವೆ. ದಾಖಲೆ ಸಂಗ್ರಹಣೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ.

ಬ್ಯಾಂಕ್‌ನವರಿಗೆ ನೋಟಿಸ್‌ ನೀಡಲಾಗಿದ್ದು, ಎಷ್ಟು ಖಾತೆಗಳಿಗೆ ಹೋಗಿದೆ ಎನ್ನುವುದನ್ನು ಮಾಹಿತಿ ಕೇಳಿದ್ದೇವೆ. ಬೇರೆ ಬೇರೆ ಇಲಾಖೆಗಳ ಖಾತೆಗಳ ಬಗ್ಗೆಯೂ ಪರಿಶೀಲನೆ ಮಾಡಲಾಗುವುದು. ಯಾರಾದರೂ ದೂರು ನೀಡಿದರೆ ಖಂಡಿತ ತನಿಖೆ ನಡೆಸುತ್ತೇವೆ. ಪ್ರವಾಸೋದ್ಯಮ ಇಲಾಖೆಯಲ್ಲಿ 2021ರಿಂದ ಇಲ್ಲಿಯವರೆಗೂ ಬಂದ ಡಿಡಿಗಳ ಬಳಿಯೂ ಮಾಹಿತಿ ಪಡೆಯಲಿದ್ದೇವೆ. ಬ್ಯಾಂಕ್‌ನಿಂದ ವಿವರಣೆ ಬಂದ ಬಂದ ಮೇಲೆ ವೈಯಕ್ತಿಕವಾಗಿ ನೋಟಿಸ್ ನೀಡಲಿದ್ದೇವೆ. ಬೇರೆ ಖಾತೆಗಳಿಗೆ ಹೋಗಿದೆಯೋ, ಬೇರೆ ಇಲಾಖೆ ಖಾತೆಗಳಿಗೆ ಹೋಗಿದೆಯೋ ಎಂಬುದನ್ನು ಪರಿಶೀಲನೆ‌ ಮಾಡುತ್ತೇವೆ ಎಂದಿದ್ದಾರೆ.

 

Share This Article