ನವದೆಹಲಿ: ಕೊನದಾಸಪುರದಲ್ಲಿ ಬಿಡಿಎ ಫ್ಲಾಟ್‍ಗಳ (BDA Flat) ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (B. S. Yediyurappa) ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್ (Supreme Court) ಮಧ್ಯಂತರ ತಡೆ ನೀಡಿದೆ. ಬಿ.ಎಸ್ ಯಡಿಯೂರಪ್ಪ ಜನಪ್ರತಿನಿಧಿಯಾಗಿರುವ ಹಿನ್ನೆಲೆಯಲ್ಲಿ ತಡೆ ನೀಡಲಾಗಿದೆ.
ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯಪಾಲರ (Governer) ಪೂರ್ವಾನುಮತಿ ಇಲ್ಲದಿದ್ದರೂ ತನಿಖೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಮಾಡಿದೆ, ಈ ಆದೇಶಕ್ಕೆ ತಡೆ ನೀಡುವಂತೆ ಕೋರಿ ಬಿ.ಎಸ್ ಯಡಿಯೂರಪ್ಪ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ನ್ಯಾ.ಡಿ.ವೈ ಚಂದ್ರಚೂಡ್ (Dhananjaya Yeshwant Chandrachud)ನೇತೃತ್ವದ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿ.ಎಸ್ ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ಮುಕುಲ್ ರೊಹಟಗಿ, ಜನಪ್ರತಿನಿಧಿಗಳ ವಿಷಯದಲ್ಲಿ ತನಿಖೆಗೆ ರಾಜ್ಯಪಾಲರ ಪೂರ್ವಾನುಮತಿ ಕಡ್ಡಾಯ, ಹೀಗಿದ್ದರು ಹೈಕೋರ್ಟ್ ತನಿಖೆಗೆ ಸೂಚಿಸಿದೆ ಎಂದು ವಾದಿಸಿದರು. ವಾದ ಆಲಿಸಿದ ಬಳಿಕ ಯಡಿಯೂರಪ್ಪ ವಿರುದ್ಧ ತನಿಖೆಗೆ ಪೀಠ ತಡೆ ನೀಡಿ, ಪ್ರತಿವಾದಿಗಳಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿತು.
ಸಚಿವ ಎಸ್.ಟಿ. ಸೋಮಶೇಖರ್ (S.T. Somashekar) ಬಿಡಿಎ ಅಧ್ಯಕ್ಷ ಆಗಿದ್ದ ವೇಳೆ ಅಕ್ರಮ ನಡೆದಿದೆ ಎನ್ನಲಾಗಿದ್ದು, ಬಿಎಸ್‍ವೈ ಪುತ್ರ ಬಿ.ವೈ. ವಿಜಯೇಂದ್ರ (B. Y. Vijayendra) ಸೇರಿ ಒಟ್ಟು ಒಂಬತ್ತು ಮಂದಿ ಆರೋಪಿಗಳಾಗಿದ್ದಾರೆ. ಬಿಎಸ್‍ವೈ ಬಿಟ್ಟು ಉಳಿದವರ ವಿರುದ್ಧ ತನಿಖೆ ಮುಂದುವರಿಸಲು ಸುಪ್ರೀಂಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಬ್ರೇಕ್‍ಅಪ್ ಮಾಡಿದ್ದಕ್ಕೆ ಪ್ರಿಯತಮೆಯ ನಗ್ನ ಫೋಟೋ ಲೀಕ್ ಮಾಡ್ದ
ಅಕ್ರಮಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಬಳಿಕ ತನಿಖೆಗೆ ಸೂಚಿಸಲು ಹೈಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಹೈಕೋರ್ಟ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಇದನ್ನೂ ಓದಿ: ಗಾಂಧಿ ಕುಟುಂಬದ ಯಾರೊಬ್ಬರೂ AICC ಅಧ್ಯಕ್ಷರಾಗಬಾರದೆಂದು ರಾಹುಲ್ ನಿರ್ಧರಿಸಿದ್ದಾರೆ – ಅಶೋಕ್ ಗೆಹ್ಲೋಟ್