ನವದೆಹಲಿ: ಕರ್ನಲ್ ಸೋಫಿಯಾ ಖುರೇಷಿಯವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಮಧ್ಯಪ್ರದೇಶ ಬಿಜೆಪಿ (BJP) ಸಚಿವ ವಿಜಯ್ ಶಾ (Vijay Sha) ಅವರನ್ನು ಸುಪ್ರೀಂ ಕೋರ್ಟ್ (Supreme Court) ತರಾಟೆ ತೆಗೆದುಕೊಂಡಿದೆ. ಮೊದಲು ಕರ್ನಲ್ ಸೋಫಿಯಾ ಬಳಿ ಹೋಗಿ ಕ್ಷಮೆ ಕೇಳಿ ಎಂದು ತಾಕೀತು ಮಾಡಿದೆ.
ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ವಿಜಯ್ ಶಾ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಈ ವೇಳೆ ವಿಜಯ್ ಶಾಗೆ ಸುಪ್ರೀಂ ಕ್ಲಾಸ್ ತೆಗೆದುಕೊಂಡಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯಾಗಿ ನೀವು ಎಂತಹ ಭಾಷೆ ಬಳಕೆ ಮಾಡುತ್ತಿದ್ದೀರಿ ಎಂಬ ಅರಿವಿರಲಿ. ಸ್ವಲ್ಪ ಸಂವೇದನಾಶೀಲತೆ ತೋರಿಸಿ. ಮೊದಲು ಹೋಗಿ ಖುರೇಶಿ ಅವರ ಬಳಿ ಕ್ರಮೆಯಾಚಿಸಿ ಎಂದು ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ಸೋಫಿಯಾ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ
ಸೋಫಿಯಾ ಉಗ್ರರ ಸಹೋದರಿ ಎಂಬರ್ಥದಲ್ಲಿ ವಿಜಯ್ ಶಾ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಕ್ಷಮೆ ಕೋರಿದ್ದ ಅವರು, ನನ್ನ ಮಾತಿನ ಉದ್ದೇಶ ಅದಾಗಿರಲಿಲ್ಲ. ನಾನು ಹತ್ತಲ್ಲ.. ನೂರು ಬಾರಿ ಕ್ಷಮೆ ಕೋರುತ್ತೇನೆ ಎಂದಿದ್ದರು.
ವಿಜಯ್ ಶಾ ಹೇಳಿದ್ದೇನು?
ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ್ ಶಾ ಅವರು ಪಾಕಿಸ್ತಾನ ವಿರುದ್ಧ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಯಶಸ್ಸನ್ನು ಹೇಳಿ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದರು.
ಭಾಷಣದಲ್ಲಿ, ಭಯೋತ್ಪಾದಕರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದ್ದರು. ಆ ಉಗ್ರರಿಗೆ ಪಾಠ ಕಲಿಸಲು ಅವರ ಸಹೋದರಿಯನ್ನು ನಾವು ಕಳುಹಿಸಿದ್ದೇವೆ ಎಂದು ಹೇಳಿದ್ದರು.
ಭಾಷಣದಲ್ಲಿ ವಿಜಯ್ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರರನ್ನು ಸದೆ ಬಡಿಯಲು ಮುಸ್ಲಿಂ ಸಮುದಾಯಕ್ಕೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ಅವರ ಹೆಸರನ್ನು ಸ್ಪಷ್ಟವಾಗಿ ಹೇಳದೇ ಇದ್ದರೂ ಅವರನ್ನು ಉಲ್ಲೇಖಿಸಿಯೇ ಭಾಷಣ ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಬಳಿಕ ಜಬ್ಬಲ್ಪುರ ಹೈಕೋರ್ಟ್ ಇದನ್ನು ಅಶ್ಲೀಲ ಭಾಷೆ ಎಂದು ಪರಿಗಣಿಸಿತ್ತು. ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ, ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು. ಇದನ್ನೂ ಓದಿ: ಮೊದಲು ಉಗ್ರರನ್ನು ಹಸ್ತಾಂತರಿಸಿ – ಪಾಕ್‌ನ ಸಿಂಧೂ ನದಿ ಒಪ್ಪಂದ ಮನವಿಗೆ ಜೈಶಂಕರ್ ಮಾತು