– ಮನೆ ಮನೆ ಸಮೀಕ್ಷೆ ಮೇ 25ರ ವರೆಗೆ ವಿಸ್ತರಣೆ
ಬೆಂಗಳೂರು: ನಗರದಲ್ಲಿ (Bengaluru) ಒಳ ಮೀಸಲಾತಿ ಸಮೀಕ್ಷೆಗೆ ಸಹಕರಿಸದಿದ್ರೆ ನೀರು, ಕರೆಂಟ್ ಯಾಕೆ ಕಟ್ ಮಾಡ್ಬಾರದು ಎಂದು ಏಕಸದಸ್ಯ ಆಯೋಗದ ಅಧ್ಯಕ್ಷ ನ್ಯಾ. ಹೆಚ್.ಎನ್.ನಾಗಮೋಹನ್ ದಾಸ್ (Nagamohan Das ) ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಒಳ ಮೀಸಲಾತಿ ಜಾರಿ ವಿಚಾರವಾಗಿ ದತ್ತಾಂಶ ಸಂಗ್ರಹಕ್ಕೆ ನಡೆಯುತ್ತಿದೆ. ಎಸ್‌ಸಿ ಸಮುದಾಯದ ಮನೆ ಮನೆ ಸಮೀಕ್ಷಾ ಅವಧಿ ವಿಸ್ತರಣೆ ಮಾಡಲಾಗಿದೆ. ಎಸ್‌ಸಿ ಸಮುದಾಯದ ಮನೆ ಮನೆ ಸಮೀಕ್ಷೆ ಮೇ 25ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಒಳ ಮೀಸಲಾತಿಗಾಗಿ ಇಂದಿನಿಂದ ಸಮೀಕ್ಷೆ, 2 ತಿಂಗಳಲ್ಲಿ ಜಾರಿ – ಯಾವ ಹಂತದಲ್ಲಿ ಏನು?
73.72% ಮನೆ ಮನೆ ಸಮೀಕ್ಷೆ ಪೂರ್ಣ
ವಿಶೇಷ ಶಿಬಿರದ ದಿನಾಂಕ ಮರು ನಿಗದಿ ಮಾಡಿದ್ದು, ಮೇ 26ರಿಂದ ಮೇ 28ರ ತನಕ ನಡೆಯಲಿದೆ. ಅನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ದಿನಾಂಕ ಮೇ 19ರಿಂದ ಮೇ 28ರ ತನಕ ನಿಗದಿ ಮಾಡಿದ್ದು, ಇಲ್ಲಿ ತನಕ 73.72% ಮನೆ ಮನೆ ಸಮೀಕ್ಷೆ ಪೂರ್ಣ ಆಗಿದೆ.
ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಅಂದ್ರೆ ನೀರು, ಕರೆಂಟ್ ಏಕೆ ಬೇಕು?
ಬೆಂಗಳೂರಿನಲ್ಲಿ ಕೇವಲ 36% ಮಾತ್ರ ಸಮೀಕ್ಷೆ ಆಗಿದ್ದು, ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಸಹಕರಿಸುತ್ತಿಲ್ಲ. ಅವರ ಮಾಹಿತಿಯನ್ನೇ ನೀಡಲ್ಲ ಎಂದರೆ ಅವರಿಗೆ ನೀರು, ಕರೆಂಟ್ ಕಟ್ ಮಾಡಿದರೆ ಹೇಗೆ? ಅವರು ಸಮೀಕ್ಷೆಯಲ್ಲಿ ಭಾಗವಹಿಸಲ್ಲ ಅಂದ್ರೆ ನೀರು, ಕರೆಂಟ್ ಏಕೆ ಬೇಕು? ಈಗಾಗಲೇ ಬಿಬಿಎಂಪಿಗೆ ಸೂಚನೆ ಕೊಟ್ಟಿದ್ದೇವೆ. ಸಮೀಕ್ಷೆ ಸಹಕರಿಸಲು ಎಚ್ಚರಿಕೆ ಕೊಡುವಂತೆ ಲಿಖಿತವಾಗಿ ಬಿಬಿಎಂಪಿಗೆ ಸೂಚಿಸಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಂಟ್ರೋಲ್ ರೂಂ ತೆರೆಯಲು ಸಹ ಸೂಚಿಸಿದ್ದೇವೆ. ಖಾಸಗಿ ಶಾಲೆಯ ಶಿಕ್ಷಕರನ್ನ ಸಮೀಕ್ಷೆಗೆ ನೇಮಿಸಲು ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 2011ರ ಜನಗಣತಿ ಪ್ರಕಾರ ಎಸ್‌ಸಿ ಸಮುದಾಯದಲ್ಲಿ 101 ಉಪಜಾತಿಗಳಿವೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದಾರೆ. ಸಮೀಕ್ಷೆಗಳು ಮುಗಿದ ಬಳಿಕ ದತ್ತಾಂಶ ಸಂಗ್ರಹದ ಅಧ್ಯಯನ ಮಾಡುತ್ತೇವೆ. ಸುಪ್ರೀಂ ಕೋರ್ಟ್ ಆದೇಶದ ಮಾನದಂಡಗಳನ್ನು ಅನುಸರಿಸುತ್ತೇವೆ. ಆ ಬಳಿಕ ಒಳ ಮೀಸಲಾತಿ ಜಾತಿಗಳನ್ನ ವರ್ಗೀಕರಣ ಮಾಡುತ್ತೇವೆ. ಯಾವುದೇ ವಿಳಂಬ ಆಗದಂತೆ ಅಂತಿಮ ವರದಿ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಳ ಮೀಸಲಾತಿ ಜಾರಿ ಮಾಡಿಯೇ ಮಾಡ್ತೀವಿ, ಯಾರಿಗೂ ಅನ್ಯಾಯ ಮಾಡಲ್ಲ: ಸಿದ್ದರಾಮಯ್ಯ