ನವದೆಹಲಿ: ದಯಾಮರಣ ಆಯ್ಕೆ ಮಾಡುವುದು ಮೂಲಭೂತ ಹಕ್ಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪಂಚ ಪೀಠದ ನ್ಯಾಯಾಧೀಶರಾದ ಎಕೆ ಸಿಕ್ರಿ, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಅವರಿದ್ದ ಪೀಠ ಕೆಲ ಮಾರ್ಗಸೂಚಿಗಳನ್ನು ತಿಳಿಸಿ ದಯಾಮರಣಕ್ಕೆ ಅನುಮತಿ ನೀಡಿದೆ.
Advertisement
ಯಾವುದೇ ಒಬ್ಬ ವ್ಯಕ್ತಿ ವೈದ್ಯಕೀಯ ಮಂಡಳಿ ಮತ್ತು ಹೈಕೋರ್ಟ್ ಅನುಮತಿ ಪಡೆದ ನಂತರ ದಯಾಮರಣ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಆ ವ್ಯಕ್ತಿಗೆ ತನ್ನ ಜೀವ ರಕ್ಷಿಸಲು ಬೇಕಾದ ಮದ್ದು ಮತ್ತು ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕಿದೆ ಎಂದು ತಿಳಿಸಿದೆ. ಆದರೆ ಚುಚ್ಚುಮದ್ದು ನೀಡಿ ಸಾಯಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಿದೆ.
Advertisement
ದಯಾಮರಣ ಎಂದರೇನು?
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯೊಬ್ಬ ಮುಂದೆ ಈ ಸಮಸ್ಯೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಮೂಲಕ ಕೇಳಿಕೊಳ್ಳುವುದೆ ದಯಾಮರಣ. ಹಲವು ರಾಷ್ಟ್ರಗಳಲ್ಲಿ ದಯಾಮರಣಕ್ಕೆ ಅನುಮತಿ ಇದೆ.
Advertisement
Advertisement
ಯುಥೆನೇಸಿಯಾ ಎಂದು ಕರೆಯುವುದು ಯಾಕೆ?
ಯುಥೆನೇಸಿಯಾ ಮತ್ತು ದಯಾಮರಣ ಎರಡೂ ಒಂದೇ. ಗ್ರೀಕ್ ಭಾಷೆಯಲ್ಲಿ ಒಳ್ಳೆಯ ಸಾವು ಎನ್ನುವುದಕ್ಕೆ ಯುಥೆನೇಸಿಯಾ ಎಂದು ಕರೆಯಲಾಗುತ್ತದೆ.
ಸುಪ್ರೀಂ ಹೇಳಿದ್ದು ಏನು?
ವ್ಯಕ್ತಿಯ ಕಾಯಿಲೆ ಗುಣಮುಖವಾಗುವುದೇ ಇಲ್ಲ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದರೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಮೂಲಕ ನಿಷ್ಕ್ರಿಯ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ಇದೇ ವೇಳೆ ವೈದ್ಯಕೀಯ ಮಂಡಳಿ ವ್ಯಕ್ತಿಯ ಗುಣಪಡಿಸದ ಕಾಯಿಲೆ ಕುರಿತು ದೃಢಪಡಿಸಿದರೆ ವ್ಯಕ್ತಿಯ ಜೀವ ರಕ್ಷಿಸುವ ವೈದ್ಯಕೀಯ ಸವಲತ್ತು ನಿರಾಕರಿಸಬಹುದು ಎಂದು ಹೇಳಿದೆ.
ಅರ್ಜಿ ಸಲ್ಲಿಸಿದವರು ಯಾರು?
2005 ರಲ್ಲಿ ‘ಕಾಮನ್ ಕಾಸ್’ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು `ಲಿವಿಂಗ್ ವಿಲ್’ ಮೂಲಕ ದಯಾಮರಣ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಬಹು ವರ್ಷಗಳಿಂದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಪರೋಕ್ಷ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿತ್ತು. 2011ರಲ್ಲಿ ಭಾರತದ ಸುಪ್ರೀಂಕೋರ್ಟ್ 37 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ನರಳಿದ್ದ ನರ್ಸ್ ಅರುಣಾ ಶಾನ್‍ಭಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ `ಪರೋಕ್ಷ ದಯಾಮರಣ’ಕ್ಕೆ ಅನುಮತಿ ನೀಡಿರಲಿಲ್ಲ. ಈ ತೀರ್ಪು ಪ್ರಕಟವಾದ ಬಳಿಕ ದಯಾಮರಣವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಐದು ಮಂದಿ ನ್ಯಾಯಧೀಶರ ಪಂಚಪೀಠವನ್ನು ರಚಿಸಿತ್ತು.
ಪ್ರತ್ಯಕ್ಷ ಮತ್ತು ಪರೋಕ್ಷ ದಯಾಮರಣ ಎಂದರೇನು?
ಅಂಗಾಂಗಗಳು ನಿಷ್ಕ್ರೀಯಗೊಂಡಿರುವ ರೋಗಿಗೆ ನೀಡಿರುವ ವೆಂಟಿಲೇಟರ್ ಸಹಿತ ಜೀವಾಧಾರ ವ್ಯವಸ್ಥೆಯನ್ನು ತೆಗೆಯುವುದು ಪರೋಕ್ಷ ದಯಾಮರಣ. ಒಬ್ಬ ವ್ಯಕ್ತಿಗೆ ಮಾರಣಾಂತಿಕ ರಾಸಾಯನಿಕವನ್ನು ನೀಡಿ ಹತ್ಯೆ ಮಾಡುವುದು ಪ್ರತ್ಯಕ್ಷ ದಯಾಮರಣ. ಪ್ರತ್ಯಕ್ಷ ದಯಾಮರಣ ಕಾನೂನುಬಾಹಿರ.
ಏನಿದು ಲಿವಿಂಗ್ ವಿಲ್?
ವ್ಯಕ್ತಿಯೊಬ್ಬ ನಾನು ಮೃತಪಟ್ಟ ನಂತರ ನನ್ನ ಆಸ್ತಿಯನ್ನು ಯಾರಿಗೆ ಹಂಚಬೇಕು ಇತ್ಯಾದಿ ವಿಚಾರಗಳನ್ನು ಲಿಖಿತವಾಗಿ ಬರೆಯುವುದಕ್ಕೆ ವಿಲ್ ಎಂದು ಕರೆಯುತ್ತಾರೆ. ಈ ವಿಲ್ ಎಲ್ಲರಿಗೂ ತಿಳಿದಿದ್ದರೂ ಲಿವಿಂಗ್ ವಿಲ್ ಸ್ವಲ್ಪ ಅದೇ ರೀತಿಯಾಗಿ ಬರುತ್ತದೆ. ಗಂಭೀರ ಚಿಕಿತ್ಸೆಗೆ ದಾಖಲಾಗುವ ಮೊದಲು ಅಥವಾ ಅನುಮತಿಯನ್ನು ನೀಡಲಾಗದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ತನಗೆ ಯಾವ ರೀತಿಯ ಚಿಕಿತ್ಸೆಯನ್ನು ನೀಡಬೇಕು ಎನ್ನುವ ನಿರ್ಧಾರಗಳನ್ನು ಮುಂದೆ ಯಾರು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸುವ ಲಿಖಿತ ದಾಖಲೆಯೇ ಲಿವಿಂಗ್ ವಿಲ್. ಶುಕ್ರವಾರ ಕೋರ್ಟ್ ರೋಗಿ ಲಿವಿಂಗ್ ವಿಲ್ ನೀಡಿದ್ದರೆ ದಯಾಮರಣ ಕಲ್ಪಿಸಬಹುದು ಎಂದು ಹೇಳಿದೆ. ಲಿವಿಂಗ್ ವಿಲ್ ಮೂಲಕ ದಯಾಮರಣ ಕಲ್ಪಿಸಿದ್ದರೆ ರೋಗಿ, ವೈದ್ಯರು ಹಾಗೂ ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ.
ದಯಾಮರಣ ವಿರೋಧಿಗಳ ವಾದ ಏನಿತ್ತು?
ಒತ್ತಡ ಹೇರಿ ಲಿವಿಂಗ್ ವಿಲ್ ಬರೆದುಕೊಂಡು ರೋಗಿಯ ದೇಹದ ಅಂಗಾಂಗವನ್ನು ದುರುಪಯೋಗ ಮಾಡಬಹುದು. ಒಂದು ವೇಳೆ ಅವಕಾಶ ನೀಡಿದರೆ ಇದು ಹಣ ಮಾಡುವ ದಂಧೆಯಾಗಬಹುದು. ಹೀಗಾಗಿ ಅವಕಾಶ ನೀಡಬಾರದು ಎಂದು ವಾದಿಸಿದ್ದರು.
ಕೇಂದ್ರದ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
ದೀರ್ಘ ಕಾಲದ ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ದಯಾಮರಣ ನೀಡುವ ಸಂಬಂಧ, ಕಳೆದ ವರ್ಷ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿತ್ತು. ಈ ಮಸೂದೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡಲು ಆಸ್ಪತ್ರೆಗಳಲ್ಲಿ ಸಮಿತಿ ರಚಿಸಿ ಗುಣಮುಖವಾಗದ ಕಾಯಿಲೆ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಬೇಕು. ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸಿ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ದಯಾಮರಣವನ್ನು ಸಹಜ ಮರಣ ಎಂದು ಪರಿಗಣಿಸಲಾಗುವುದು ಎನ್ನುವ ಅಂಶವಿತ್ತು.
ಅಷ್ಟೇ ಅಲ್ಲದೇ ದಯಾಮರಣಕ್ಕೊಳಗಾದ ರೋಗಿ, ವೈದ್ಯರು, ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ. ರೋಗಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಚಿಕಿತ್ಸೆ ಬೇಡ ಎಂದು ಆಪ್ತ ಸಂಬಂಧಿಕರ ಮನವಿ ಅಗತ್ಯ. ಎಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದಯಾಮರಣ ಮನವಿ ಸ್ವೀಕರಿಸಿ ಅದಕ್ಕೆ ಅನುಮತಿ ನೀಡುವ ಸಮತಿ ರಚಿಸಬೇಕು. ಬದುಕುವ ಸಾಧ್ಯತೆ ಇಲ್ಲ, ಆಯಸ್ಸು ಮುಂದೂಡಲು ಇಷ್ಟವಿಲ್ಲ ಎನ್ನುವ `ಲಿವಿಂಗ್‍ವಿಲ್’ ಅರ್ಜಿಯನ್ನು ಸಮಿತಿ ಪರಿಶೀಲಿಸಬೇಕು. ಸಮಿತಿಗೆ ತಪ್ಪು ಮಾಹಿತಿ ನೀಡಿ ದಯಾ ಮರಣಕ್ಕೆ ಅನುಮತಿ ಪಡೆದಿರುವುದು ಸಾಬೀತಾದರೆ 5-10 ವರ್ಷ ಜೈಲು ಶಿಕ್ಷೆಯ ಜೊತೆ 20 ಲಕ್ಷದಿಂದ 1 ಕೋಟಿ ರೂ. ದಂಡ ವಿಧಿಸಲು ಪರಿಷ್ಕೃತ ಕರಡು ಮಸೂದೆಯಲ್ಲಿ ಅವಕಾಶವಿದೆ.