ಮಡಿಕೇರಿ: ಕೊಡಗಿನ ಮಹಾಮಳೆಗೆ ಸಂತ್ರಸ್ತರಾಗಿ ಸೂರು ಕಳೆದುಕೊಂಡ ಇಬ್ಬರು ಸಹೋದರಿಯರು ಸಹಾಯಕ್ಕಾಗಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.
ಕೊಡಗು ಸಂಪಾಜೆ ಸಮೀಪದ ಕೊಯನಾಡಿನ ನಿವಾಸಿಗಳಾದ 80 ವರ್ಷದ ಸಾಯಿಬಾ ಮತ್ತು ಅಂಗವಿಕಲ ತಂಗಿ ಸೈನಬಾ ಇಬ್ಬರು ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಭೀಕರ ಮಳೆ ಭೂ ಕೂಸಿತಕ್ಕೆ ಪ್ರಾಣ ಹೋಗುವ ಸಂದರ್ಭ ಬಂದಿದ್ರೂ ತಾವು ಸಾಕುತ್ತಿರುವ ಜಾನುವಾರಗಳನ್ನು ಸುರಕ್ಷಿತ ಸ್ಥಳಕ್ಕೆ ಬರುವುದಿಲ್ಲ ಎಂದು ಹಠ ಹಿಡಿದು ನಾಡಿನ ಗಮನ ಸೆಳೆದವರು ಈ ಸಹೋದರಿಯರು. ಮುದ್ದಿನಿಂದ ಸಾಕಿದ ಮೂಕ ಪ್ರಾಣಿಗಳ ರಕ್ಷಣೆ ಬಿಟ್ಟು ಬರುವುದಿಲ್ಲ ಸತ್ತರೆ ಇಲ್ಲೇ ಸಾಯುತ್ತೇವೆ ಎಂದು ಮಾದರಿಯಾದವರು. ಭೀಕರ ಮಳೆಯಿಂದಾಗಿ ಮನೆಯ ಸುತ್ತಲೂ ನೀರು ಆವರಿಸಿದ್ದರೂ, ಪಯಸ್ವಿನಿ ನದಿ ಭೋರ್ಗರೆಯುತ್ತಿದ್ದರೂ ಧೃತಿಗೆಡದೇ ನದಿಯ ತಟದಲ್ಲೇ ಇದ್ದು ಜಾನುವಾರಗಳ ರಕ್ಷಣೆ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ದಿನ ಕಳೆದಂತೆ ಪಯಸ್ವಿನಿ ಶಾಂತವಾಗಿ ನೀರಿನ ಮಟ್ಟ ಇಳಿದು ಸಹಜ ಸ್ಥಿತಿಗೆ ಬಂದಿದ್ದು, ಸಾವನ್ನು ಗೆದ್ದು ಬಂದು ಜಾನುವಾರುಗಳೊಂದಿಗೆ ಹೊಸ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಈ ಹಿರಿ ಜೀವಗಳ ಛಲ ನಿಜಕ್ಕೂ ಅಚ್ಚರಿ.
ಗಂಡು ದಿಕ್ಕು ಇಲ್ಲದ ಈ ಮನೆಯ ವೃದ್ಧ ಜೀವಗಳಿಗೆ 80 ಅಡಿಕೆ ಮರಗಳು ಹಾಗು ಜಾನುವಾರುಗಳೇ ಆಧಾರ. ಪಯಸ್ವಿನಿ ನದಿ ಉಕ್ಕಿ ಹರಿದಿದ್ದರಿಂದ ಭಾರೀ ಸಂಕಷ್ಟ ಅನುಭವಿಸಿದ್ದಾರೆ. ಸ್ವಾಭಿಮಾನದಿಂದ ಬದುಕುತ್ತಿರುವ ಈ ಜೀವಗಳಿಗೆ ನೆಮ್ಮದಿಯ ಜೀವನ ಮಾಡಲು ಸರಿಯಾದ ಮನೆ ಇಲ್ಲದೇ ಪರಿಪಾಟಲು ಪಡುತ್ತಿದ್ದಾರೆ.
ವಯಸ್ಸಾದ ಈ ದಿಟ್ಟ ಮಹಿಳೆಯರು ಕೊನೆಗಾಲದಲ್ಲಿ ನೆಮ್ಮದಿಯ ಜೀವನ ಮಾಡಲು ಬಯಸುತ್ತಿದ್ದು, ಒಂದು ಮನೆ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಲ್ಲಿ ಸಹಾಯ ಬಯಸುತ್ತಿದ್ದಾರೆ. ಕರುನಾಡಿನ ಸಹೃದಯಿಗಳ ಸಹಕಾರದಿಂದ ಈ ಹಿರಿ ಜೀವಗಳಿಗೆ ಸೂರು ನಿರ್ಮಿಸುವ ಪ್ರಯತ್ನದ ಭಾಗವಾಗಿ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಡುತ್ತಿದ್ದೇವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=XG6KkYHmHbc