ಚಾಮರಾಜನಗರ: ಗಡಿನಾಡು ಚಾಮರಾಜನಗರದಲ್ಲಿ ‘ಸೇವ್ ಬಂಡೀಪುರ’ ಹೋರಾಟ ಮತ್ತೆ ಮುನ್ನೆಲೆಗೆ ಬಂದಿದೆ. ಬಂಡೀಪುರ ನೈಟ್ ಬ್ಯಾನ್ ತೆರವು ಮಾಡದಂತೆ ಅನ್ನದಾತರು ಆಗ್ರಹಿಸಿದ್ದಾರೆ.
ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ವನ್ಯಮೃಗಗಳ ಪ್ರಾಣಕ್ಕೆ ಸಂಚಕಾರ ಎದುರಾಗಲಿದೆ. ತಡರಾತ್ರಿ ಕಾಡು ಪ್ರಾಣಿಗಳ ಬೇಟೆ, ಮಾಂಸಕ್ಕಾಗಿ ಶಿಕಾರಿ ಹಾಗೂ ಸ್ಮಗ್ಲಿಂಗ್ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ನೈಟ್ ಬ್ಯಾನ್ ತೆರವು ಮಾಡದಂತೆ ರೈತರ ಆಗ್ರಹಿಸಿದ್ದಾರೆ.
ಬಂಡೀಪುರ ಉಳಿಸಿ ಎಂದು ಅಭಿಯಾನವನ್ನು ರೈತರು ಶುರು ಮಾಡಿದ್ದಾರೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ರಾತ್ರಿ ಸಂಚಾರಕ್ಕೆ ನಿರ್ಬಂಧವಿದೆ. ಸುಪ್ರೀಂ ಕೋರ್ಟ್ ಗೈಡ್‌ಲೈನ್ಸ್ ಪ್ರಕಾರ ನೈಟ್ ಬ್ಯಾನ್ ಜಾರಿಯಲ್ಲಿದೆ. ಆದರೆ, ನೈಟ್ ಬ್ಯಾನ್ ತೆರವಿಗೆ ಸಂಸದೆ ಪ್ರಿಯಾಂಕಾ ಗಾಂಧಿ ಕರ್ನಾಟಕ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯಿಂದ ರಾಜ್ಯ ಸರ್ಕಾರಕ್ಕೆ ಒತ್ತಡ ಹೇರಲಾಗುತ್ತಿದೆ. ಸಂಸದೆ ಪ್ರಿಯಾಂಕಾ ಮಾತಿಗೆ ಮಣಿದು ನೈಟ್ ಬ್ಯಾನ್‌ಗೆ ತಡೆ ಒಡ್ಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ ನಡೆಸುತ್ತಿದೆ.
ನಗರದ ಭುವನೇಶ್ವರಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರೈತರು ಧರಣಿ ಕುಳಿತಿದ್ದಾರೆ.
ಸೇವ್ ಬಂಡಿಪುರ ಅಭಿಯಾನ ಜೋರಾಗ್ತಿದ್ದು, ಇಂದು ಲೋಕಸಭೆಯಲ್ಲೂ ಪ್ರತಿಧ್ವನಿಸಿದೆ. ವಯನಾಡಿನ ಹಾಲಿ ಮತ್ತು ಮಾಜಿ ಸಂಸದರ ಒತ್ತಡದ ಕಾರಣ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಡಲು ಕಾಂಗ್ರೆಸ್ ಮುಂದಾಗ್ತಿದೆ. ಇದನ್ನು ತಡೆಯಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ.