ರಾಮನಗರ: ಕಾಡು ಹಂದಿಗಳ ಬೇಟೆಗಾಗಿ ದುಷ್ಕರ್ಮಿಗಳು ಹಾಕಿದ್ದ ಉರುಳಿಗೆ ಕರಡಿಯೊಂದು ಸಿಕ್ಕಿಬಿದ್ದು, ನರಕಯಾತನೆ ಅನುಭವಿಸಿದ ಘಟನೆ ರಾಮನಗರ ತಾಲೂಕಿನ ಬಿಳಗುಂಬ ಗ್ರಾಮದಲ್ಲಿ ನಡೆದಿದೆ.
ಬಿಳಗುಂಬ ಗ್ರಾಮದ ರಮೇಶ್ ಎಂಬವರ ಗಂಧ ಹಾಗೂ ಮಾವಿನ ಮರದ ತೋಪಿನಲ್ಲಿ ಕಿಡಿಗೇಡಿಗಳು ರಾತ್ರಿ ಹಂದಿ ಬೇಟೆಗಾಗಿ ಬೈಕ್‍ನ ಕ್ಲಚ್ ವೈರ್‍ಗಳ ಉರುಳನ್ನು ಹಾಕಿದ್ದಾರೆ. ಬೆಳಗ್ಗಿನ ಜಾವದ ವೇಳೆ ಆಹಾರ ಅರಸಿ ಬಂದ ಒಂದೂವರೆ ವರ್ಷದ ಹೆಣ್ಣು ಕರಡಿ ಉರುಳಿನಲ್ಲಿ ಸಿಕ್ಕಿಬಿದ್ದಿದೆ. ಉರುಳಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಹರಸಾಹಸ ಮಾಡಿದೆ. ಆದದೂ ಏನು ಪ್ರಯೋಜನವಾಗಿಲ್ಲ. ಈ ವೇಳೆ ತೋಟದ ಕಡೆಗೆ ಬಂದಿದ್ದ ಗ್ರಾಮದ ಜನ ಅರಣ್ಯ ಇಲಾಖೆಗೆ ಕರಡಿ ಸಿಲುಕಿಬಿದ್ದಿರುವ ಮಾಹಿತಿಯನ್ನ ರಾಮನಗರ ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ನೀಡಿದ್ದಾರೆ.
ಮಾಹಿತಿ ತಿಳಿದ ಬನ್ನೇರುಘಟ್ಟ ವನ್ಯಜೀವಿಧಾಮದ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಅರವಳಿಕೆ ಚುಚ್ಚುಮದ್ದು ನೀಡಿ ಕರಡಿಯನ್ನು ಉರುಳಿನಿಂದ ಬಿಡಿಸಿದ್ದಾರೆ. ಗಾಯಗೊಂಡಿದ್ದ ಕರಡಿಗೆ ಚಿಕಿತ್ಸೆ ನೀಡಿ ಬನ್ನೇರುಘಟ್ಟ ಅರಣ್ಯಕ್ಕೆ ಬಿಡಲು ರವಾನಿಸಲಾಯಿತು. ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಆತಂಕದಲ್ಲೇ ಕಾಲ ಕಳೆಯುತ್ತಿರುವುದಾಗಿ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.