ಬೆಂಗಳೂರು: ಕನ್ನಡ ಚಿತ್ರರಂಗದವೀಗ ಹೊಸ ಹರಿವು ಹೊಸ ಆವೇಗದೊಂದಿಗೆ ಮುಂದುವರೆಯುತ್ತಿದೆ. ಈ ಸಾಲಿಗೆ ಮತ್ತೊಂದು ಸೇರ್ಪಡೆಯಂತಿರೋ ಚಿತ್ರ ‘ಸವರ್ಣದೀರ್ಘ ಸಂಧಿ’. ವೀರೇಂದ್ರ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶನವನ್ನೂ ಮಾಡಿರುವ ಈ ಚಿತ್ರ ತನ್ನ ವಿಶಿಷ್ಟವಾದ ಟೈಟಲ್ ಕಾರಣದಿಂದಲೇ ಪ್ರೇಕ್ಷಕರಲ್ಲೊಂದು ಛಳುಕು ಮೂಡಿಸುವಲ್ಲಿ ಯಶ ಕಂಡಿದೆ. ಒಂದೇ ಸಲಕ್ಕೆ ಸೆಳೆಯುವಂತಿರೋ ಟೈಟಲ್, ಅದಕ್ಕೆ ತಕ್ಕುದಾದ ಟ್ರೇಲರ್ ಮತ್ತು ನೇರವಾಗಿ ಹೃದಯಕ್ಕೇ ಲಗ್ಗೆಯಿಡುವಂಥಾ ಹಾಡುಗಳ ಹಿಮ್ಮೇಳದಲ್ಲಿ ಈ ಚಿತ್ರ ಇದೇ ಹದಿನೆಂಟರಂದು ತೆರೆಗಾಣುತ್ತಿದೆ.
Advertisement
ಲುಷಿಂಗ್ಟನ್ ಥಾಮಸ್, ಹೇಮಂತ್ ಕುಮಾರ್ ಪಿವಿಆರ್ ಸೇರಿದಂತೆ ನಾಲ್ಕು ಮಂದಿ ಸೇರಿ ನಿರ್ಮಾಣ ಮಾಡಿರೋ ಸವರ್ಣದೀರ್ಘ ಸಂಧಿ ಗ್ಯಾಂಗ್‍ಸ್ಟರ್ ಕಾಮಿಡಿ ಎಂಬ ಅತ್ಯಂತ ಅಪರೂಪದ ಜಾನರಿನ ಚಿತ್ರ. ಈಗಾಗಲೇ ತುಳು ಚಿತ್ರರಂಗದಲ್ಲಿ ಚಾಲಿಪೋಲಿಲು ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿರುವ ವೀರೇಂದ್ರ ಶೆಟ್ಟಿ ಅವರ ಮೊದಲ ಕನ್ನಡ ಚಿತ್ರವಿದು. ಆರಂಭದಿಂದಲೂ ಕನ್ನಡ ಸಿನಿಮಾ ರಂಗದತ್ತ ಆಕರ್ಷಣೆ ಹೊಂದಿದ್ದ ಅವರು ಎಂಟ್ರಿ ಕೊಟ್ಟರೆ ಡಿಫರೆಂಟಾಗಿರೋ ಸಿನಿಮಾದೊಂದಿಗೇ ಕೊಡಬೇಕೆಂಬ ಅಭಿಲಾಷೆಯನ್ನಿಟ್ಟುಕೊಂಡಿದ್ದರು.
Advertisement
Advertisement
ಅದು ಸವರ್ಣದೀರ್ಘ ಸಂಧಿಯ ಮೂಲಕ ಸಾಕಾರಗೊಂಡಿದೆ. ಈ ಸಿನಿಮಾದಲ್ಲಿ ನಾಯಕ ಗ್ಯಾಂಗ್‍ಸ್ಟರ್. ಹೀಗೆಂದಾಕ್ಷಣ ಮಚ್ಚ ಲಾಂಗುಗಳ ಆರ್ಭಟ, ರಕ್ತದೋಕುಳಿಗಳೆಲ್ಲ ಇಲ್ಲ ಅಂದುಕೊಂಡರದು ತಪ್ಪು. ಯಾಕೆಂದರೆ ಇಲ್ಲಿರೋ ಗ್ಯಾಂಗ್‍ಸ್ಟರ್ ನಗುವಿನ ಹೊಳೆ ಹರಿಸುತ್ತಾನೆ. ಭೂಗತ ಜಗತ್ತೆಂದರೆ ಅಕ್ಷರ, ಸಾಹಿತ್ಯ ಮುಂತಾದವುಗಳ ಪರಿಚಯ ಇಲ್ಲದವರ ಲೋಕ ಎಂಬ ನಂಬಿಕೆ ಇದೆ. ಆದರೆ ಇಲ್ಲಿನ ಗ್ಯಾಂಗ್‍ಸ್ಟರ್ ವ್ಯಾಕರಣದಲ್ಲಿ ಎಂಥವರೂ ಅದುರಿ ಬಿಡುವಷ್ಟು ಪಾಂಡಿತ್ಯ ಹೊಂದಿರುತ್ತಾನೆ. ಆ ಮೂಲಕವೇ ನಗಿಸುತ್ತಾನೆ. ಇಷ್ಟು ವಿವರಗಳೇ ಈ ಸಿನಿಮಾ ಬಗ್ಗೆ ಮೋಹಗೊಳ್ಳುವಂತೆ ಮಾಡುತ್ತವೆ. ಈ ಮಜವಾದ ಕಥೆ ಇದೇ ಹದಿನೆಂಟರಂದು ನಿಮ್ಮೆಲ್ಲರನ್ನು ತಲುಪಿಕೊಳ್ಳಲಿದೆ.