Connect with us

International

ಸೌದಿ ಅರೇಬಿಯಾದಿಂದ ತೈಲ ಉತ್ಪಾದನೆ ಕಡಿತ – ಮತ್ತೆ ದರ ಏರಿಕೆ ಸಾಧ್ಯತೆ

Published

on

ಅಬುಧಾಬಿ: ಸೌದಿ ಅರೇಬಿಯಾ ಡಿಸೆಂಬರ್ ಬಳಿಕ ತೈಲೋತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದು, ತೈಲ ದರ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ.

ಡಿಸೆಂಬರ್ ನಲ್ಲಿ  ದಿನದ ಸರಾಸರಿ ಉತ್ಪಾದನೆಯಲ್ಲಿ 5 ಲಕ್ಷ ಬ್ಯಾರೆಲ್‍ನಷ್ಟು ಕಡಿತಗೊಳಿಸಲು ಸೌದಿ ಅರೇಬಿಯಾ ನಿರ್ಧಾರ ತೆಗೆದುಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಬ್ರೆಂಟ್ ಕಚ್ಚಾ ತೈಲ ದರದಲ್ಲಿ ಶೇ.2ರಷ್ಟು ಏರಿಕೆಯಾಗಿದ್ದು ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 71.52 ಡಾಲರ್  ತಲುಪಿದೆ.

ಮಾರುಕಟ್ಟೆಯಲ್ಲಿ ದರವನ್ನು ಸ್ಥಿರಗೊಳಿಸಲು 10 ಲಕ್ಷ ಬ್ಯಾರೆಲ್ ತನಕ ತೈಲ ಉತ್ಪಾದನೆಯನ್ನು ಕಡಿತಗೊಳಿಸಬೇಕಾದ ಅಗತ್ಯವಿದೆ. ಹೀಗಾಗಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿದ್ದೇವೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವ ಖಲೀದ್ ಅಲ್ ಫಾಲಿ ಅಬುಧಾಬಿಯಲ್ಲಿ ನಿರ್ಧಾರಕ್ಕೆ ಸಮರ್ಥನೆ ನೀಡಿದ್ದಾರೆ.

14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಸದಸ್ಯ ರಾಷ್ಟ್ರಗಳ ಪೈಕಿ ಸೌದಿ ಅರೇಬಿಯಾ ಒಂದೇ ಜಾಗತಿಕ ಕಚ್ಚಾ ತೈಲದ ಮೂರನೇ ಒಂದರಷ್ಟನ್ನು ಪೂರೈಸುತ್ತದೆ. ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಒಪೆಕ್ ರಾಷ್ಟ್ರಗಳು ಸಹ ತೈಲ ಉತ್ಪಾದನೆಯನ್ನು ಮುಂದಿನ ವರ್ಷ ಕಡಿತಗೊಳಿಸಬೇಕು ಎಂದು ಖಲೀದ್ ಅಲ್ ಫಾಲಿ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಜಾಸ್ತಿ ಪ್ರಮಾಣದಲ್ಲಿ ತೈಲ ಪೊರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 1 ತಿಂಗಳಿನಿಂದ ಕಚ್ಚಾ ತೈಲ ದರ ಐದನೇ ಒಂದರಷ್ಟು ಇಳಿಕೆಯಾಗಿದೆ. ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದರೂ ಮಾರುಕಟ್ಟೆಯ ಮೇಲೆ ಅಷ್ಟೊಂದು ಪರಿಣಾಮ ಬೀರದ ಪರಿಣಾಮ ಬೆಲೆ ಕಡಿಮೆಯಾಗಿತ್ತು.

ಪ್ರತಿದಿನ ಒಟ್ಟು 10 ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 6 ರಂದು ವಿಯೆನ್ನಾದಲ್ಲಿ ಒಪೆಕ್ ರಾಷ್ಟ್ರಗಳ ಸಭೆ ನಡೆಯಲಿದ್ದು ಅಲ್ಲಿ ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ. ಕಚ್ಚಾ ತೈಲ ದರ ಶುಕ್ರವಾರ ಬ್ಯಾರೆಲ್‍ಗೆ 70 ಡಾಲರ್ ಗೆ  ಇಳಿದಿದ್ದರೆ, ಸೋಮವಾರ 71  ಡಾಲರ್ ಗೆ ಏರಿಕೆಯಾಗಿತ್ತು.

ಸೌದಿ ಅರೇಬಿಯಾ ತೈಲವೇ ದೊಡ್ಡ ಆರ್ಥಿಕ ಸಂಪನ್ಮೂಲ. ಕೆಲ ದಿನಗಳಿಂದ ತೈಲ ದರ ಇಳಿಕೆಯಾಗುತ್ತಿದೆ. ದರ ಇಳಿಕೆಯಾದರೆ ದೇಶದ ಆದಾಯಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ಉತ್ಪಾದನೆಯನ್ನು ಕಡಿತಗೊಳಿಸಿ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಸಿ ಆದಾಯವನ್ನು ಹೆಚ್ಚಿಸಲು ಈ ತಂತ್ರಕ್ಕೆ  ಸೌದಿ ಅರೇಬಿಯಾ ಮುಂದಾಗಿದೆ.

ಸೌದಿ ಅರೇಬಿಯಾ ಈ ನಿರ್ಧಾರಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ. ಒಪೆಕ್ ಮತ್ತು ಸೌದಿ ಅರೇಬಿಯಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಿಲ್ಲ ಎನ್ನುವ ಆಶಾವಾದವನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

 

 

Click to comment

Leave a Reply

Your email address will not be published. Required fields are marked *