ರಿಯಾದ್: ಮಹತ್ವದ ವಿದ್ಯಮಾನದಲ್ಲಿ ಸೌದಿ ಅರೇಬಿಯಾ (Saudi Arabia) ಅಮೆರಿಕದ (USA) ಜೊತೆ ಮಾಡಿಕೊಂಡಿದ್ದ 50 ವರ್ಷಗಳ ಹಳೆಯ ಪೆಟ್ರೋಡಾಲರ್ ಒಪ್ಪಂದವನ್ನು (Petrodollar Agreement) ಕೊನೆಗೊಳಿಸಲು ನಿರ್ಧರಿಸಿದೆ.
ಜೂನ್ 8, 1974 ರಂದು ಸಹಿ ಹಾಕಿದ್ದ ಒಪ್ಪಂದ ಜೂನ್ 9 ರಂದು ಮುಕ್ತಾಯಗೊಂಡಿದ್ದು ಈಗ ಸೌದಿ ಅರೇಬಿಯಾ ಈ ಒಪ್ಪಂದವನ್ನು ನವೀಕರಿಸದೇ ಇರುವ ತೀರ್ಮಾನವನ್ನು ತೆಗೆದುಕೊಂಡಿದೆ.
Advertisement
‘ಪೆಟ್ರೋಡಾಲರ್’ ಎಂಬ ಪದವು ಜಾಗತಿಕ ಕಚ್ಚಾ ತೈಲ (Crude Oil) ವಹಿವಾಟುಗಳಿಗೆ ಕರೆನ್ಸಿಯಾಗಿ ಅಮೆರಿಕದ ಡಾಲರ್ ಬಳಕೆಯನ್ನು ಸೂಚಿಸುತ್ತದೆ. ಈ ಒಪ್ಪಂದದ ಪ್ರಕಾರ ವಿಶ್ವದ ಯಾವುದೇ ದೇಶವೂ ಸೌದಿ ಜೊತೆ ಕಚ್ಚಾ ತೈಲ ಖರೀದಿಸಬೇಕಾದರೆ ಡಾಲರ್ ಮೂಲಕವೇ ಖರೀದಿಸಬೇಕಿತ್ತು.
Advertisement
ಅಮೆರಿಕದ ಡಾಲರ್ ಅವಲಂಬನೆ ತಪ್ಪಿಸಲು ಈಗ ದೇಶಗಳು ಸ್ಥಳೀಯ ಕರೆನ್ಸಿ ಜೊತೆ ವ್ಯವಹಾರ ನಡೆಸಲು ಆರಂಭಿಸಿದೆ. ಈಗಾಗಲೇ ಭಾರತ (India) ಕೆಲ ದೇಶಗಳಲ್ಲಿ ರೂಪಾಯಿ ಮೂಲಕ ವ್ಯಾಪಾರ ನಡೆಸುತ್ತಿದೆ. ಅದೇ ರೀತಿ ಚೀನಾ (China) ಯುವಾನ್ ಮೂಲಕ ನಡೆಸುತ್ತಿದೆ. ತೈಲ ಉತ್ಪಾದನೆ ಮಾಡುವ ಒಪೆಕ್ ರಾಷ್ಟ್ರಗಳ ಪೈಕಿ ದೊಡ್ಡ ದೇಶವಾದ ಸೌದಿ ಅರೇಬಿಯಾ ಪೆಟ್ರೋಡಾಲರ್ ಒಪ್ಪಂದವನ್ನು ನವೀಕರಿಸದ ಕಾರಣ ಡಾಲರ್ ಬೆಲೆ ಮತ್ತಷ್ಟು ಕುಗ್ಗಲಿದೆ.
Advertisement
Advertisement
ಏನಿದು ಒಪ್ಪಂದ?
ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಮತ್ತು ಸೌದಿ ರಾಜಮನೆತನದ ಜೊತೆ ಸರಣಿ ಮಾತುಕತೆ ನಡೆದು ಜೂನ್ 8, 1974 ರಂದು ಒಪ್ಪಂದಕ್ಕೆ ಸಹಿ ಹಾಕಿದ ನಂತರ ಪೆಟ್ರೋಡಾಲರ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಇದನ್ನೂ ಓದಿ: ಆರ್‌ಬಿಐನಿಂದ ಸಾಧನೆ – ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್ ಚಿನ್ನ!
ಸೌದಿ ಅರೇಬಿಯಾ ಸಹಿ ಹಾಕಿದ್ದು ಯಾಕೆ?
ಅಟೊಮೊಬೈಲ್ ಕ್ಷೇತ್ರ ತೆರೆದುಕೊಳ್ಳುತ್ತಿದ್ದಂತೆ ಅಮೆರಿಕ ಮತ್ತು ಬ್ರಿಟಿಷರು ತೈಲ ನಿಕ್ಷೇಪಗಳನ್ನು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಭೂಮಿಯಿಂದ ತೈಲವನ್ನು ಕೊರೆಯುವ ತಂತ್ರಜ್ಞಾನ ಈ ದೇಶಗಳಿಗೆ ಮಾತ್ರ ತಿಳಿದಿತ್ತು. 1938ರಲ್ಲಿ ಅಮೆರಿಕದ ಕಂಪನಿ ಸೌದಿ ಅರೇಬಿಯಾದಲ್ಲಿ ತೈಲ ಕೊರೆಯಲು ಆರಂಭಿಸಿತ್ತು. ಸೌದಿ ಅರೇಬಿಯಾಗೆ ತಮ್ಮ ಬಳಿ ಇದ್ದ ಈ ಅಮೂಲ್ಯ ಸಂಪತ್ತು ಮುಂದೆ ವಿಶ್ವವನ್ನೇ ಆಳುತ್ತದೆ ಎಂಬ ಕಲ್ಪನೆ ಸಹ ಇರಲಿಲ್ಲ. ಈ ಸಂದರ್ಭದಲ್ಲಿ ಭೂಮಿಯಿಂದ ಕಚ್ಚಾ ತೈಲವನ್ನು ತೆಗೆದು ಸಂಸ್ಕರಿಸುವ ತಂತ್ರಜ್ಞಾನ ಅಮೆರಿಕ ಮತ್ತು ಬ್ರಿಟಿಷ್ ಕಂಪನಿಗಳಿಗೆ ಮಾತ್ರ ತಿಳಿದಿತ್ತು.
ಎರಡನೇ ಮಹಾಯುದ್ಧದ ಸಮಯದಲ್ಲಿ ಇಟಲಿ ಅಮೆರಿಕವನ್ನು ಗುರಿಯಾಗಿಸಿಕೊಂಡು ಸೌದಿ ಮೇಲೆ ದಾಳಿ ನಡೆಸಿತು. ಸೌದಿ ಮೇಲೆ ಇಟಲಿ ದಾಳಿ ನಡೆಸಲು ಕಾರಣವಿದೆ. ತನ್ನ ವಿರೋಧಿ ದೇಶಗಳಿಗೆ ಇಂಧನವನ್ನು ಸೌದಿ ಪೂರೈಸುತ್ತದೆ ಎಂದು ತಿಳಿದು ಬಹರೇನ್ ಮತ್ತು ಸೌದಿ ಮೇಲೆ ಬಾಂಬ್ ದಾಳಿ ನಡೆಸಿತು. ಈ ದಾಳಿಯಿಂದ ಸೌದಿಗೆ ಕಚ್ಚಾ ತೈಲ ಉತ್ಪಾದನೆ ಮಾಡಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಅಮೆರಿಕ ಸೌದಿಯ ರಕ್ಷಣೆಗೆ ಮುಂದಾಯಿತು.
ಎರಡನೇ ಮಹಾಯುದ್ಧದ ನಂತರ ಅಮೆರಿಕ ಮತ್ತು ಯುಎಸ್‌ಎಸ್‌ಆರ್ ಮಧ್ಯೆ ಶೀತಲ ಸಮರ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಕೆಲ ದೇಶಗಳು ಅಮೆರಿಕ ಪರ ನಿಂತರೆ ಕೆಲವು ಯುಎಸ್‌ಎಸ್‌ಆರ್ ಪರ ನಿಂತವು. ಸೌದಿ ಅರೇಬಿಯಾ ದೇಶವಾಗಿದ್ದರೂ ಸರಿಯಾದ ಸೇನಾ ಬಲವನ್ನು ಹೊಂದಿರಲಿಲ್ಲ. ಈ ವೇಳೆ ಸೌದಿ ಅರೇಬಿಯಾದಲ್ಲಿರುವ ತೈಲ ಸಂಪತ್ತು ಮುಂದೆ ಇಡೀ ವಿಶ್ವವನ್ನೇ ಆಳಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಅಮೆರಿಕ ಸೌದಿ ರಕ್ಷಣೆಗೆ ಮುಂದಾಗುತ್ತದೆ. ಸೌದಿಯ ರಾಜಮನೆತನದ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತದೆ.
ಸೌದಿಯಲ್ಲಿರುವ ಎಲ್ಲಾ ತೈಲ ಕೊರೆಯುವ ಬಾವಿಗಳಿಗೆ ನಾವು ಸಂಪೂರ್ಣ ರಕ್ಷಣೆ ನೀಡುತ್ತೇವೆ. ಇದಕ್ಕೆ ಪ್ರತಿಯಾಗಿ ನೀವು ಎಲ್ಲಾ ದೇಶಗಳ ಜೊತೆ ತೈಲ ವ್ಯವಹಾರ ಮಾಡಲು ಡಾಲರ್ ಅನ್ನು ಬಳಸಬೇಕು ಎಂದು ಷರತ್ತನ್ನು ಅಮೆರಿಕ ವಿಧಿಸುತ್ತದೆ. ಬೇರೆ ದೇಶಗಳು ದಾಳಿ ಮಾಡಬಹುದು ಎಂಬ ಭಯದಿಂದ ಸೌದಿ ಈ ಷರತ್ತನ್ನು ಒಪ್ಪಿಕೊಂಡು ಒಪ್ಪಂದಕ್ಕೆ ಸಹಿ ಹಾಕುತ್ತದೆ. ಷರತ್ತಿನಿಂದಾಗಿ ಕಚ್ಚಾ ತೈಲ ವ್ಯವಹಾರ ಡಾಲರ್‌ನಲ್ಲೇ ನಡೆಯುತ್ತದೆ. ಪರಿಣಾಮ ವಿಶ್ವದಲ್ಲೇ ಡಾಲರ್ ವಿಶ್ವದ ಕರೆನ್ಸಿಯಾಗಿ ಬದಲಾಗುತ್ತದೆ.
ಚಿನ್ನದಿಂದ ಶ್ರೀಮಂತವಾಯ್ತು ಅಮೆರಿಕ
ಎರಡನೇ ಮಹಾಯುದ್ಧಕ್ಕೆ ಅಮೆರಿಕ ತಡವಾಗಿ ಪ್ರವೇಶ ಮಾಡಿದ್ದರಿಂದ ಯುಕೆ, ಯುಎಸ್‌ಎಸ್‌ಆರ್‌ಗೆ ಬಲ ಬಂದಿತ್ತು. ಆದರೆ ಈ ಮಿತ್ರ ರಾಷ್ಟ್ರಗಳ ಮಧ್ಯೆ ಮಧ್ಯೆ ವ್ಯವಹಾರಕ್ಕೆ ಬಹಳ ಸಂಕಷ್ಟ ಎದುರಾಗಿತ್ತು. ಯಾಕೆಂದರೆ ಒಂದೊಂದು ರಾಷ್ಟ್ರದಲ್ಲಿ ಒಂದೊಂದು ಕರೆನ್ಸಿ ಇತ್ತು. ಈ ಸಮಸ್ಯೆ ಪರಿಹಾರಕ್ಕೆ ಅಮೆರಿಕದಲ್ಲಿ 1944ರಲ್ಲಿ ಬ್ರೆಟ್ಟನ್‌ವುಡ್ಸ್ ಒಪ್ಪಂದಕ್ಕೆ 44 ದೇಶಗಳು ಸಹಿ ಹಾಕಿದ್ದವು.
ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅಮೆರಿಕನ್ ಡಾಲರ್ ಅನ್ನು ಎಲ್ಲಾ ದೇಶಗಳು ವ್ಯವಹಾರಕ್ಕೆ ಬಳಸಲು ಅಧಿಕೃತ ಒಪ್ಪಿಗೆ ನೀಡಿದವು. ದೇಶಗಳು ಚಿನ್ನವನ್ನು ನೀಡಿ ಅಮೆರಿಕನ್ ಡಾಲರ್ ಖರೀದಿಸುವುದು ಒಪ್ಪಂದದ ಮುಖ್ಯ ತಿರುಳು. ಈ ವೇಳೆ ಒಂದು ಔನ್ಸ್ ಅಥವಾ 28.35 ಗ್ರಾಂ ಚಿನ್ನಕ್ಕೆ 35 ಡಾಲರ್ ದರವನ್ನು ನಿಗದಿ ಮಾಡಲಾಗಿತ್ತು. ಈ ಚಿನ್ನದ ಒಪ್ಪಂದಕ್ಕೆ ಅಮೆರಿಕ ಬಂದಿದ್ದು ಯಾಕೆ ಎನ್ನುವುದಕ್ಕೆ ಕಾರಣವಿದೆ. 1910ರಲ್ಲಿ 2 ಸಾವಿರ ಟನ್ ಚಿನ್ನ ಅಮೆರಿಕದಲ್ಲಿ ಇದ್ದರೆ ತನ್ನ ಎಲ್ಲಾ ವ್ಯವಹಾರಗಳಿಂದ 1940ರ ವೇಳೆಗೆ ಇದು 20 ಸಾವಿರ ಟನ್‌ಗೆ ಏರಿಕೆಯಾಗಿತ್ತು. ಮಾಹಿತಿಗಳ ಪ್ರಕಾರ ಅಂದು ವಿಶ್ವದ 75% ಚಿನ್ನ ಅಮೆರಿಕದ ಬಳಿ ಇತ್ತು. ಚಿನ್ನ ಹೊಂದಿದ್ದವರೇ ಬಾಸ್ ಎನ್ನುವಂತೆ ಬ್ರೆಟ್ಟನ್‌ವುಡ್ಸ್ ಒಪ್ಪಂದದ ಬಳಿಕ ಡಾಲರ್ ವಿಶ್ವದ ಕರೆನ್ಸಿಯಾಗಿ ಬದಲಾಯ್ತು. ಪರಿಣಾಮ ಅಮೆರಿಕ ಶ್ರೀಮಂತ ದೇಶವಾಗಿ ಹೊರಹೊಮ್ಮಿತ್ತು.