– ನಿನ್ನೆ ರಾತ್ರಿಯಿಡೀ ನನ್ನ ಮೇಲೆ ದೌರ್ಜನ್ಯ ಎಸಗಿದ್ರು ಎಂದು ಆರೋಪ
ಬೆಂಗಳೂರು: ಸತ್ಯಮೇವ ಜಯತೆ.. ಸತ್ಯಕ್ಕೆ ಜಯ ಸಿಕ್ಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಂತಸ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್‌ನಿಂದ ಬಿಡುಗಡೆಗೆ ಆದೇಶ ಹೊರಡಿಸಿದ ಬೆನ್ನಲ್ಲೇ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಾವೇನು ಮಾತನಾಡಿದ್ವಿ ಮತ್ತು ಅವರೇನು ಮಾತನಾಡಿದ್ರು ಎನ್ನುವುದಕ್ಕೆ ಕಸ್ಟೋಡಿಯನ್ ನಮ್ಮ ಪರಿಷತ್‌ನ ಸಭಾಪತಿಗಳು. ಸಭಾಪತಿಗಳೇ ರೂಲಿಂಗ್ ಕೊಟ್ಟರು. ಅದಾದ ಬಳಿಕವೂ ಅವರು ಸದನದಲ್ಲಿ ಯಾವ ರೀತಿ ನಡೆದುಕೊಂಡರು ಎಂಬುದನ್ನು ನೋಡಿದ್ದೀರಿ. ಹಲ್ಲೆಗೆ ಪ್ರಯತ್ನಿಸಿದರು. ನಿನ್ನೆ ರಾತ್ರಿಯಿಡೀ ನಮ್ಮ ಮೇಲೆ ದೌರ್ಜನ್ಯ ಎಸಗಿದರು ಎಂದು ಬೇಸರ ವ್ಯಕ್ತಪಡಿಸಿದರು.
ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಸಿ.ಟಿ.ರವಿ ಅವರನ್ನು ಗುರುವಾರ ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್, ಆರೋಪಿಗೆ ಜಾಮೀನು ನೀಡಿದೆ. ತಕ್ಷಣವೇ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.