ಲಕ್ನೋ: ಹತ್ರಾಸ್ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿ 121 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು (UP Police) ಗುರುವಾರ ತಿಳಿಸಿದ್ದಾರೆ.
ಸತ್ಸಂಗ ಕಾರ್ಯಕ್ರಮ ಸಂಘಟನಾ ಸಮಿತಿಯ 6 ಮಂದಿ ಸದಸ್ಯರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ (ಜು.2) ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ (Bhole Baba aka Narayan Saakar Hari) ಪ್ರವಚನ ಕಾರ್ಯಕ್ರಮದ ನಂತರ ಕಾಲ್ತುಳಿತ ಸಂಭವಿಸಿ 121 ಮಂದಿ ಸಾವನ್ನಪ್ಪಿದ್ದರು. 31 ಮಂದಿ ಗಾಯಗೊಂಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಸೇರಿ 6 ಮಂದಿಯನ್ನು ಬಂಧಿಸಲಾಗಿದೆ. ಅವರೆಲ್ಲರೂ ಸಂಘಟನಾ ಸಮಿತಿಯ ಸದಸ್ಯರಾಗಿದ್ದು, ಸೇವಾದಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಅಲಿಗಢ್ ಇನ್ಸ್‌ಪೆಕ್ಟರ್ ಜನರಲ್ ಶಲಭ್ ಮಾಥುರ್ ಹೇಳಿದ್ದಾರೆ. ಇದನ್ನೂ ಓದಿ: ಹುತಾತ್ಮ ಅಗ್ನಿವೀರ್ ಕುಟುಂಬಕ್ಕೆ 98.39 ಲಕ್ಷ ನೀಡಲಾಗಿದೆ – ರಾಹುಲ್ ಆರೋಪದ ಬೆನ್ನಲ್ಲೇ ಸೇನೆ ಸ್ಪಷ್ಟನೆ
ಪ್ರಮುಖ ಆರೋಪಿ ಸುಳಿವು ಕೊಟ್ಟರೆ 1 ಲಕ್ಷ ರೂ. ಬಹುಮಾನ:
ಎಫ್‌ಐಆರ್‌ನಲ್ಲಿ ಮುಖ್ಯ ಸೇವಾದಾರ ದೇವಪ್ರಕಾಶ್ ಮಧುಕರ್‌ನನ್ನ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಈತ ನಾಪತ್ತೆಯಾಗಿದ್ದು, ಮಧುಕರ್ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಅಲ್ಲದೇ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ ಎಂದೂ ತಿಳಿಸಿದ್ದಾರೆ. ಇದನ್ನೂ ಓದಿ: ತವರಿಗೆ ಮರಳಿದ ʼವಿಶ್ವʼ ಚಾಂಪಿಯನ್ಸ್! – ಇಂದು ಸಂಜೆ ಮುಂಬೈನಲ್ಲಿ ರೋಡ್ ಶೋ
ಕಾಲ್ತುಳಿತ ಸಂಭವಿಸಿದ್ದು ಹೇಗೆ?
ಸತ್ಸಂಗ (Satsang) ಕಾರ್ಯಕ್ರಮ ಮುಗಿದ ಬಳಿಕ ಸ್ವಯಂ ಘೋಷಿತ ಗುರು ಭೋಲೆ ಬಾಬಾ ನಾರಾಯಣ್ ಸಾಕರ್ ಹರಿ ಕಾರು ಹತ್ತಿದ್ದಾರೆ. ಕಾರು ಮುಂದಕ್ಕೆ ಹೋಗುತ್ತಿದ್ದಂತೆ ಚಕ್ರದ ಧೂಳನ್ನು ಸಂಗ್ರಹಿಸಲು ಅನುಯಾಯಿಗಳು ಮುಗಿಬಿದ್ದಿದ್ದಾರೆ. ಭಾರೀ ಸಂಖ್ಯೆಯಲ್ಲಿದ್ದ ಅನುಯಾಯಿಗಳು ಧೂಳು ಸಂಗ್ರಹಿಸಲು ಓಡಿದ ಪರಿಣಾಮ ಪುರುಷರು, ಮಹಿಳೆಯರು ಮತ್ತು ಮಕ್ಕಳು ಒಬ್ಬರ ಮೇಲೊಬ್ಬರು ಬಿದ್ದಿದ್ದಾರೆ. ಬಿದ್ದವರ ಮೇಲೆಯೇ ಜನರು ಓಡಿದ್ದರಿಂದ ಸಾವು, ನೋವಿನ ಸಂಖ್ಯೆ ಹೆಚ್ಚಾಗಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರ ಸೂಚನೆ ನಂತರ ಪ್ರಕರಣಕ್ಕೆ ಸಂಬಂಧಿಸಿದ 6 ಮಂದಿಯನ್ನ ಬಂಧಿಸಲಾಗಿದೆ. ಅಗತ್ಯವಿದ್ದರೆ, ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಅವರನ್ನೂ ಸಹ ವಿಚಾರಣೆಗೆ ಒಳಪಡಿಸಬಹುದು. ಸದ್ಯಕ್ಕೆ ಅವರ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿಲ್ಲ, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: MUDA Site Allotment Scam | ನನಗೆ 62 ಕೋಟಿ ಕೊಡಬೇಕು: ಸಿಎಂ