ಬೆಂಗಳೂರು: ರಿಯಲ್ ಸಿಂಗಂ ಐಪಿಎಸ್ ದಕ್ಷ ಅಧಿಕಾರಿ ಮಧುಕರ್ ಶೆಟ್ಟಿ ಅವರು ಶುಕ್ರವಾರ ನಿಧನರಾಗಿದ್ದು, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಧುಕರ್ ಶೆಟ್ಟಿ ಅವರು ನಮ್ಮನ್ನೆಲ್ಲ ಅಗಲಿರೋದು ತುಂಬಾ ಬೇಸರವಾಗುತ್ತಿದೆ. ಲೋಕಾಯುಕ್ತ ಚರಿತ್ರೆಯಲ್ಲೇ ಮಧುಕರ್ ಅವರು ಒಬ್ಬ ಉತ್ತಮ ಪೊಲೀಸ್ ಅಧಿಕಾರಿ. ಲೋಕಾಯುಕ್ತದಲ್ಲಿ ಇರುವಾಗ ನಮ್ಮೊಂದಿಗೆ ಇದ್ದು ಸಹಕರಿಸಿದ್ದರು. ಅವರೊಬ್ಬರು ನಿಷ್ಠಾವಂತ, ದಕ್ಷ ಅಧಿಕಾರಿ. ಯಾವ ರಾಜಕಾರಣಿಗೂ ಅಥವಾ ಯಾವುದೇ ವ್ಯಕ್ತಿಗಳಿಗೂ ಅವರು ಹೆದರದೇ ಕೆಲಸ ಮಾಡ್ತಾ ಇದ್ರು. ದೇವರು ಅವರ ಕುಟುಂಬಕ್ಕೆ ಅವರ ಸಾವನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ. ಮಧುಕರ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದರು.
Advertisement
Advertisement
ನಾನು ಲೋಕಾಯುಕ್ತಕ್ಕೆ ಬಂದ ನಂತರ ಮಧುಕರ್ ಶೆಟ್ಟಿ ಅವರು ರಾಜ್ಯಪಾಲರಿಗೆ ಡಿಸಿ ಆಗಿದ್ದರು. ಆಗ ನಾನು ಅವರನ್ನು ನೀವು ಲೋಕಾಯುಕ್ತಕ್ಕೆ ಬತ್ರ್ತಿರಾ ಅಂತ ಕೇಳಿದ್ದೆ. ನಂತರ ಅವರು ಲೋಕಾಯುಕ್ತಕ್ಕೆ ಎಸ್ಪಿ ಆಗಿ ಬಂದರು. ಬಹಳ ಉತ್ತಮವಾಗಿ ಕೆಲಸ ಮಾಡಿದ ದಕ್ಷ ಅಧಿಕಾರಿ. ಗಣಿ ವಿಚಾರದಲ್ಲಿ ಮಾತ್ರ ಅಲ್ಲ ಬೆಂಗಳೂರು ಏರ್ ಪೋರ್ಟ್ ಬಳಿಯ ಜಮೀನು ಕಬಳಿಕೆ ಮಾಡಿಕೊಂಡ ಹಿರಿಯಾ ರಾಜಕಾರಣಿಯನ್ನು ವಿಚಾರಣೆ ಮಾಡಿ ಅವರನ್ನು ಹಾಗೂ ಅವರ ಪುತ್ರಿಯನ್ನು ಜೈಲಿಗೆ ಕಳುಹಿಸಿದ್ದರು. ಯಾರಿಗೂ ಹೆದರುವ ವ್ಯಕ್ತಿಯಲ್ಲ, ರಾತ್ರಿ ಹಗಲು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಮಧುಕರ್ ಅವರನ್ನು ನೆನೆದರು.
Advertisement
Advertisement
ಸುಮಾರು 750 ಕ್ಕೂ ಹೆಚ್ಚು ಭ್ರಷ್ಟರನ್ನು ವಿಚಾರಣೆ ಮಾಡಿ ಕೋರ್ಟ್ ಮೆಟ್ಟಿಲು ಏರಿಸಿದ ಅಧಿಕಾರಿಗಳಲ್ಲಿ ಮಧುಕರ್ ಅವರು ಒಬ್ಬರು. ಆಡಳಿತದಲ್ಲಿ ಇರುವ ನಾಯಕರು ತಮಗೆ ಬೇಕಾದ ಅಧಿಕಾರಿಗಳನ್ನು ಮಾತ್ರ ವಿಚಾರಣೆ ಹಾಗೂ ಇತರೇ ಹುದ್ದೆಯಲ್ಲಿ ಇಡುತ್ತಿದ್ದರು. ಮಧುಕರ್ ಅವರನ್ನು ಹಲವಾರು ಬಾರಿ ವರ್ಗಾವಣೆ ಮಾಡಿ ಅವರನ್ನು ವಿಚಾರಣೆ ವಿಭಾಗದಿಂದ ದೂರವಿಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ಮಧುಕರ್ ಅಂಜದೆ ತಮ್ಮ ಕೆಲಸವನ್ನು ಮಾಡುತ್ತಿದ್ದರು. ಒಬ್ಬ ವ್ಯಕ್ತಿಯಿಂದ ಭ್ರಷ್ಟರ ವಿರುದ್ಧ ಹೋರಾಡಲು ಆಗೋಲ್ಲ. ನಮ್ಮ ಜೊತೆ ಸರ್ಕಾರಿ ಅಧಿಕಾರಿಗಳು ಇರುತ್ತಾರೆ. ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶಿಕ್ಷೆ ಸಿಗುವಂತೆ ಮಾಡಿರುವ ಉತ್ತಮ ಅಧಿಕಾರಿ ಮುಧುಕರ್ ಅವರು ಅಂತ ನಾನು ತಿಳಿದಿದ್ದೇನೆ ಅಂದ್ರು.
ಮಧುಕರ್ ಶೆಟ್ಟಿ ಅವರಂತಹ ದಕ್ಷ ಅಧಿಕಾರಿಗಳು ನನ್ನ ಅವಧಿಯಲ್ಲಿ ಸಿಕ್ಕಿದ್ದು ನನ್ನ ಭಾಗ್ಯ. ಅವರು ಲೋಕಾಯುಕ್ತದಲ್ಲಿ ಇದ್ದಿದ್ದು ಕೇವಲ 2 ವರ್ಷ ಮಾತ್ರ. ಆದ್ರೆ ಈ ಇಲಾಖೆಯಲ್ಲಿ ಅವರ ಕೊಡುಗೆ ಅಪಾರ ಎಂದು ಮಧುಕರ್ ಅವರ ಸಾಧನೆಯನ್ನು ನೆನೆದುಕೊಂಡು ಅವರ ಅಗಲಿಕೆಗೆ ಬೇಸರ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv