ಇದು ಸ್ಮಾರ್ಟ್ ಯುಗ, ಪ್ರತಿಯೊಂದಕ್ಕೂ ಸ್ಮಾರ್ಟ್ ಟಚ್! ಇದಕ್ಕೆ ತಕ್ಕಂತೆ ಗ್ರಾಮಗಳು ಸಹ ನಿಧಾನವಾಗಿ ಸ್ಮಾರ್ಟ್ ಆಗುತ್ತಿವೆ. ಇದೀಗ ಮಹಾರಾಷ್ಟ್ರದ (Maharashtra) ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis) ಅವರು ನಾಗ್ಪುರ ಜಿಲ್ಲೆಯ ಸತ್ನವ್ರಿಯಲ್ಲಿ (Satnavri) ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್ (Smart Intelligent Village) ಯೋಜನೆ ಘೋಷಿಸಿದ್ದಾರೆ. ಈ ಯೋಜನೆಯ ವಿಶೇಷವೇನು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ನಾಗ್ಪುರ ನಗರದಿಂದ 31 ಕಿಮೀ ದೂರದಲ್ಲಿರುವ 1,800 ಜನಸಂಖ್ಯೆ ಹೊಂದಿರುವ ಸತ್ನವ್ರಿ ಗ್ರಾಮವನ್ನು ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಯೋಜನೆಯಲ್ಲಿ ಕೃಷಿ ಮತ್ತು ಟೆಲಿಮೆಡಿಸಿನ್‌ನಿಂದ ಹಿಡಿದು AI-ಚಾಲಿತ ನೀರಿನ ಮೇಲ್ವಿಚಾರಣೆ ವ್ಯವಸ್ಥೆ ಮತ್ತು ಡಿಜಿಟಲ್ ತರಗತಿಗಳನ್ನು ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಯೋಜನೆಯನ್ನು ಟೆಲಿಕಾಂ ವಲಯದ ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಟರ್‌ಪ್ರೈಸಸ್ (VoICE) ಪ್ರಸ್ತಾಪಿಸಿತ್ತು.
‘ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್’ ಎಂದರೆ ಏನು?
ಹಳ್ಳಿಗಳಲ್ಲಿ ದೈನಂದಿನ ಜೀವನವನ್ನು ಸುಧಾರಿಸಲು ಡಿಜಿಟಲ್ ತಂತ್ರಜ್ಞಾನ, ಇಂಟರ್ನೆಟ್, ಕೃತಕ ಬುದ್ಧಿಮತ್ತೆ (AI) ಮತ್ತು ತಡೆರಹಿತ ಸಂಪರ್ಕ ವ್ಯವಸ್ಥೆಯನ್ನು ಈ ಯೋಜನೆಯಿಂದ ಕಲ್ಪಿಸಲಾಗಿದೆ. ಈ ಯೋಜನೆ ಸತ್ನವೇರಿ ಜಿಲ್ಲೆಯಲ್ಲಿ ಯಶಸ್ಸು ಕಂಡರೆ ಮಹಾರಾಷ್ಟ್ರದ ವಿವಿಧ ಭಾಗಗಳು ಸೇರಿದಂತೆ, ದೇಶಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ.
ಯೋಜನೆಗೆ ಸತ್ನವ್ರಿಯನ್ನೇ ಏಕೆ ಆಯ್ಕೆ ಮಾಡಲಾಗಿದೆ?
ಯೋಜನೆಗೆ ಗುರುತಿಸಲಾದ ಎಲ್ಲಾ ಮಾನದಂಡಗಳು ಸತ್ನವ್ರಿಯಲ್ಲಿದೆ. ಒಂದು ಕೊಳ, ಕೃಷಿ ಭೂಮಿ, ಶಾಲೆಗಳು, ಅಂಗನವಾಡಿ, ಎಲ್ಲಾ ಸಮುದಾಯಗಳ ಪ್ರಮುಖ ಸ್ಥಳಗಳನ್ನು ಈ ಹಳ್ಳಿ ಹೊಂದಿದೆ. ಇದೇ ಕಾರಣಕ್ಕೆ ಸತ್ನವರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನಾಗ್ಪುರ ಜಿಲ್ಲಾ ಪರಿಷತ್, ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮಸ್ಥರ ನೆರವಿನಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ.
ಹೇಗಿರಲಿದೆ ಸ್ಮಾರ್ಟ್ ವಿಲೇಜ್?
ಕೃಷಿಯಲ್ಲಿ ಸ್ಮಾರ್ಟ್ ಯೋಜನೆ: ಕೃಷಿಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಮಣ್ಣು ಮತ್ತು ಬೆಳೆಯ ಸ್ಥಿತಿಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ರೈತರು 25%-40% ನೀರನ್ನು ಉಳಿಸಲು, ರಸಗೊಬ್ಬರಗಳ ವೆಚ್ಚವನ್ನು 30% ರಷ್ಟು ಕಡಿಮೆ ಮಾಡಲು, ಕೀಟಗಳ ಸಮಸ್ಯೆಯನ್ನು ಮೊದಲೇ ಪತ್ತೆಹಚ್ಚಲು ಮತ್ತು ಇಳುವರಿಯನ್ನು 25% ವರೆಗೆ ಹೆಚ್ಚಿಸಲು ಈ ಯೋಜನೆ ಸಹಾಯ ಮಾಡುತ್ತದೆ.
ಸ್ವಯಂಚಾಲಿತ ನೀರಾವರಿ ಮತ್ತು AI ಉಪಕರಣಗಳ ಬಳಕೆ: AI ಬಳಕೆಯಿಂದ ಕೃಷಿ ತ್ಯಾಜ್ಯ ನಿರ್ವಹಣೆ ಮತ್ತು ಬೆಳೆಯ ಬಗ್ಗೆ ಇರುವ ಯೋಜನೆ ಮಾಹಿತಿಗಳು ಸುಲಭವಾಗಿ ಲಭ್ಯವಾಗುತ್ತದೆ. ಇದರೊಂದಿಗೆ ಮೊಬೈಲ್ ಫೋನ್ ಅಪ್ಲಿಕೇಶನ್ ಮೂಲಕ ಹವಾಮಾನದ ಮಾಹಿತಿ ಸ್ಮಾರ್ಟ್ ರೈತರಿಗೆ ಸುಲಭವಾಗಿ ಲಭ್ಯವಾಗುತ್ತದೆ. ಇದರಿಂದ ಯಾವಾಗ ಯಾವ ಬೆಳೆ ಸೂಕ್ತ, ಯಾವ ವಾತಾವರಣದಲ್ಲಿ ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂಬುದು ಮೊದಲೆ ರೈತರಿಗೆ ಗೊತ್ತಾಗುತ್ತದೆ. ಇದು ನಷ್ಟವನ್ನು ಕಡಿಮೆ ಮಾಡಿ ರೈತರ ಇಳುವರಿ ಹೆಚ್ಚಿಸಿ, ಲಾಭವನ್ನು ತಂದು ಕೊಡಲು ಸಹಕಾರಿಯಾಗಿದೆ.
ಕೃಷಿಯಲ್ಲಿ ಡ್ರೋನ್‌ಗಳ ಬಳಕೆ: GPS ಹೊಂದಿದ ಡ್ರೋನ್‌ಗಳು ರೈತರ ಜಮೀನಿನ ನಕ್ಷೆಯ ಆಧಾರದ ಮೇಲೆ ರಸಗೊಬ್ಬರಗಳನ್ನು ಸಿಂಪಡಿಸುತ್ತವೆ. ನಿಖರವಾದ ಕೆಲಸದಿಂದ ರಾಸಾಯನಿಕಗಳ ಬಳಕೆಯನ್ನು 20%-30% ರಷ್ಟು ಕಡಿಮೆ ಮಾಡುತ್ತವೆ. ಈ ರೀತಿ ಮಾಡುವುದರಿಂದ ಕೃಷಿ ಭೂಮಿಯ ಮೇಲೆ ಸರಿಯಾದ ಪರಿಣಾಮ ಬೀರುತ್ತದೆ. ಇದು ಕಾರ್ಮಿಕರ ಸಮಯವನ್ನು 80% ಉಳಿಸುತ್ತದೆ. ಇದರ ಜೊತೆ ಸ್ಥಳೀಯ ಯುವಕರಿಗೆ ಡ್ರೋನ್‌ಗಳನ್ನು ಹಾರಿಸಲು ತರಬೇತಿ ನೀಡುವ ಮೂಲಕ ಹೊಸ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುತ್ತದೆ.
ಕ್ಯಾಮೆರಾಗಳು ಮತ್ತು ಸ್ಪ್ರೇಯರ್‌ಗಳನ್ನು ಹೊಂದಿದ ಡ್ರೋನ್‌ಗಳು ಇಮೇಜಿಂಗ್ ಮತ್ತು AI ಬಳಸಿ ಕೀಟಗಳನ್ನು ಪತ್ತೆ ಮಾಡುತ್ತವೆ. ನಂತರ ಕೀಟನಾಶಕಗಳನ್ನು ನಿಖರವಾಗಿ ಸ್ಪ್ರೇ ಮಾಡುತ್ತದೆ. ಇದು ಕೀಟನಾಶಕಗಳ ಅತಿಯಾದ ಬಳಕೆಯನ್ನು 50% ವರೆಗೆ ಕಡಿಮೆ ಮಾಡುತ್ತದೆ. ಈ ಮೂಲಕ ರೈತರ ಆರೋಗ್ಯಕ್ಕೆ ಎದುರಾಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಬೆಳೆಯ ಕೊಯ್ಲಿನ ಬಗ್ಗೆಯೂ ಸರಿಯಾದ ಮಾಹಿತಿ AI ತಂತ್ರಜ್ಞಾನದ ಮೂಲಕ ಸಿಗುತ್ತದೆ. ಬೆಳೆ ಕೊಯ್ಲಿನ ವೇಳೆ ಆಗುವ ಹವಾಮಾನದ ಬದಲಾವಣೆ ಬಗ್ಗೆಯೂ ರೈತರಿಗೆ ಸೂಕ್ತ ಮಾಹಿತಿ ಸಿಕ್ಕು, ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುತ್ತದೆ.
ಮೀನುಗಾರಿಕೆ: ಕೊಳಗಳಲ್ಲಿನ ನೀರಿನ ಗುಣಮಟ್ಟವನ್ನು ಅರಿಯಲು ತಂತ್ರಜ್ಞಾನ ಬಳಕೆ ಮಾಡಿಕೊಂಡು ಮೀನು ಸಾಕಾಣಿಕೆಗೆ ಯೋಜನೆ ರೂಪಿಸಲಾಗಿದೆ. ತಂತ್ರಜ್ಞಾನದಿಂದ ಆಮ್ಲಜನಕ, ತಾಪಮಾನ ಇನ್ನೀತರ ಮಾಹಿತಿಯನ್ನು ಕಲೆಹಾಕಿ ರೈತರಿಗೆ ನೈಜ ಸಮಯದಲ್ಲಿ ಎಚ್ಚರಿಕೆ ನೀಡುತ್ತದೆ. ಈ ಮೂಲಕ ಕೊಳದ ಬಳಿ ಇದ್ದು ಕಾರ್ಮಿಕರು ಎಲ್ಲದನ್ನೂ ಪರಿಶೀಲಿಸುವ ಅಗತ್ಯ ಇರುವುದಿಲ್ಲ. ಇಲ್ಲಿ ಕಾರ್ಮಿಕನಿಗೆ ವ್ಯಯಿಸುವ ವೆಚ್ಚ ಸಹ ಕಡಿತವಾಗುತ್ತದೆ. ಇದರಿಂದ ಮೀನುಗಳು ಸಾವನ್ನಪ್ಪುವ ಸಂಖ್ಯೆ ಕಡಿಮೆಯಾಗುತ್ತದೆ. ಇಳುವರಿ ಸಹ 20%-30% ರಷ್ಟು ಹೆಚ್ಚಾಗುತ್ತದೆ.
ಸುರಕ್ಷತೆ: ಹಳ್ಳಿಗಳಿಗೆ ಸ್ಮಾರ್ಟ್ ಬೀದಿ ದೀಪಗಳನ್ನು ಅಳವಡಿಸಲಾಗುತ್ತದೆ. ಇದು ಸುತ್ತಮುತ್ತಲಿನ ಬೆಳಕನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ.
ಡಿಜಿಟಲ್ ಶಿಕ್ಷಣ & ಆರೋಗ್ಯ ಸೇವೆಗಳು
AI ತಂತ್ರಜ್ಞಾನದಿಂದ ಡಿಜಿಟಲ್ ಪುಸ್ತಕಗಳು, ಸ್ಮಾರ್ಟ್ ಅಂಗನವಾಡಿ ಕೇಂದ್ರಗಳನ್ನು ಉತ್ತೇಜಿಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಆಸಕ್ತಿಯ ವಿಷಯದ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತದೆ. ಇದು ಶಾಲೆಗಳಲ್ಲಿ ಸಂವಾದಾತ್ಮಕ ಕಲಿಕೆಗೆ ಸಹಕಾರಿಯಾಗುತ್ತದೆ.
ಇ-ಹೆಲ್ತ್ ಕಾರ್ಡ್‌ಗಳು ಮತ್ತು ಟೆಲಿಮೆಡಿಸಿನ್ ಪೋರ್ಟಲ್‌ಗಳ ಮೂಲಕ ಆರೋಗ್ಯ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಇದು ಗ್ರಾಮಸ್ಥರನ್ನು ಸರ್ಕಾರಿ ವೈದ್ಯರ ಜೊತೆ ಸಂಪರ್ಕದಲ್ಲಿರಲು ಸಹಕಾರಿಯಾಗುತ್ತದೆ. ಇದರಿಂದ ಅನಾರೋಗ್ಯ ಪೀಡಿತರು ಸೂಕ್ತ ಸಮಯದಲ್ಲಿ ಮಾಹಿತಿ ಪಡೆದು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಇದು ಮರಣ ಸಂಖ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ.
ಆಡಳಿತ & ಮೂಲಸೌಕರ್ಯ ನವೀಕರಣ
ಸತ್ನವೇರಿ ಗ್ರಾಮ ಪಂಚಾಯತ್‌ನಲ್ಲಿ ಡಿಜಿಟಲ್ ಆಡಳಿತ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ನೀರಿನ ಗುಣಮಟ್ಟ, ನೀರಾವರಿ ಮತ್ತು ಇತರ ನಾಗರಿಕ ಸೇವೆಗಳನ್ನು ಡಿಜಿಟಲ್ ಮೇಲ್ವಿಚಾರಣೆ ಮೂಲಕವೇ ಮಾಡಲಾಗುತ್ತದೆ.
ಭವಿಷ್ಯದ ನಿರೀಕ್ಷೆಗಳು
ಈ ಯೋಜನೆ ‘ಮೇಕ್ ಇನ್ ಇಂಡಿಯಾ’ ಅಭಿಯಾನದ ಅಡಿಯಲ್ಲಿ 15 ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. VOICE ತಂತ್ರಜ್ಞಾನ ಈ ಯೋಜನೆಯನ್ನು ಮುನ್ನಡೆಸುತ್ತಿದೆ. ಮುಖ್ಯ ಕಾರ್ಯದರ್ಶಿ ಮತ್ತು ವಿಭಾಗೀಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಈ ಯೋಜನೆಯ ಪ್ರಗತಿಯನ್ನು ನೋಡಿಕೊಳ್ಳುತ್ತಾರೆ. ಈ ಯೋಜನೆಯ ಯಶಸ್ಸು ಮಹಾರಾಷ್ಟ್ರ ಮತ್ತು ಭಾರತದಾದ್ಯಂತ ನೂರಾರು ಹಳ್ಳಿಗಳಿಗೆ ಅನುಕೂಲವಾಗಲಿದೆ.
ಯೋಜನೆಯ ಸಂಕ್ಷಿಪ್ತ ವಿವರ
* ಸ್ಮಾರ್ಟ್ ಇಂಟೆಲಿಜೆಂಟ್ ವಿಲೇಜ್ ಇರುವ ಸ್ಥಳ – ಸತ್ನಾವ್ರಿ, ನಾಗ್ಪುರ ಜಿಲ್ಲೆ, ಮಹಾರಾಷ್ಟ್ರ
* ಸತ್ನವರಿಯ ಜನಸಂಖ್ಯೆ – ಸುಮಾರು 1,800
* ತಂತ್ರಜ್ಞಾನ ಪಾಲುದಾರ – ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಟರ್‌ಪ್ರೈಸಸ್ (VOICE)
* ಕೃಷಿ ತಂತ್ರಜ್ಞಾನ – ಡ್ರೋನ್ ಕೃಷಿ, ಸ್ಮಾರ್ಟ್ ನೀರಾವರಿ, ತಂತ್ರಜ್ಞಾನ ಬಳಸಿ ಮಣ್ಣಿನ ಮಾಹಿತಿ
* ಶಿಕ್ಷಣ ನವೀಕರಣ ಕೃತಕ ಬುದ್ಧಿಮತ್ತೆ (AI) ಆಧಾರಿತ ಡಿಜಿಟಲ್ ಕಲಿಕೆ, ಸ್ಮಾರ್ಟ್ ಅಂಗನವಾಡಿ ಕೇಂದ್ರಗಳು
* ಆರೋಗ್ಯ ಸೇವೆಗಳು – ಇ-ಆರೋಗ್ಯ ಕಾರ್ಡ್‌ಗಳು, ಟೆಲಿಮೆಡಿಸಿನ್, ಮೊಬೈಲ್ ಚಿಕಿತ್ಸಾಲಯ
* ಸಂಪರ್ಕ – ಆಪ್ಟಿಕಲ್ ಫೈಬರ್ ನೆಟ್‌ವರ್ಕ್