– ಸೆಪ್ಟೆಂಬರ್ ಕ್ರಾಂತಿ ಗೊತ್ತಿಲ್ಲ, 3ನೇ ಕ್ರಾಂತಿ ಆಗಬಹುದು!
ಹುಬ್ಬಳ್ಳಿ: ನಾನು ಸಿಎಂ ಆಗೋಕೆ ಗುರು ಬಲ, ತಾರಾ ಬಲ ಬೇಕು, ಜೊತೆಗೆ ಶನಿಕಾಟ ಕಡಿಮೆ ಆಗ್ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿ, ನಾನು ಸಿಎಂ ಆಗಲು ಗುರುಬಲ, ತಾರಾ ಬಲ ಕೂಡಬೇಕು. ಶನಿಕಾಟ ಕಡಿಮೆಯಾಗಬೇಕು. ಒಬ್ಬೊಬ್ಬರಿಗೆ ಒಂದೊಂದು ರೀತಿ ಸಮಸ್ಯೆ ಇವೆ. ನನಗೆ ಶನಿಕಾಟ ಇದೆ ಎಂದಿದ್ದಾರೆ.
ಸಿಎಂ ದೆಹಲಿ ಭೇಟಿ ವಿಚಾರವಾಗಿ, ಯಾವುದೇ ನಿಗಮ ಮಂಡಳಿ ನೇಮಕ ಪೈನಲ್ ಮಾಡುವುದಾದರೂ ರಾಹುಲ್ ಗಾಂಧಿಯವರಿಗೆ ಹೇಳಿ ಮಾಡ್ತಾರೆ. ವಾರಕ್ಕೊಮ್ಮೆ ದೆಹಲಿಗೆ ಹೋದರೂ ಕಡಿಮೆ. ನಿಗಮ ಮಂಡಳಿ ಚರ್ಚೆಗೆ ಹೋಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಇನ್ನೂ ನಿಗದಿಯಾಗಿಲ್ಲ ಎಂದಿದ್ದಾರೆ.
ರಾಜ್ಯಾಧ್ಯಕ್ಷ ಬದಲಾವಣೆ ಅಜೆರ್ಂಟ್ ಇಲ್ಲ. ನಮ್ಮ ಅಭಿಪ್ರಾಯ ನಾವು ಹೇಳಿರಬಹುದು. ಆದರೆ ಯಾವುದು ಸೂಕ್ತ ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಎರಡು ಹುದ್ದೆ ಇವೆ, ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅಧ್ಯಕ್ಷರಾಗಲು ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ.
ಸೆಪ್ಟೆಂಬರ್ ಕ್ರಾಂತಿ ಬಗ್ಗೆ ನನಗೆ ಗೊತ್ತಿಲ್ಲ. ನಾನು ರಾಜಣ್ಣ ಅವರನ್ನು ಭೇಟಿಯಾಗಿ ಕೇಳ್ತೇನೆ. ಅಧ್ಯಕ್ಷ ಮತ್ತು ಡಿಸಿಎಂ ಬದಲಾವಣೆ ಬಿಟ್ಟು ಬೇರೆ ಕ್ರಾಂತಿ ಆಗಬಹುದು. ಸಿಎಂ ಮತ್ತು ಕೆಪಿಸಿಸಿ ವಿಚಾರ ಬಿಟ್ಟು ಮೂರನೇ ಕ್ರಾಂತಿ ಆಗಬಹುದು ಎಂದಿದ್ದಾರೆ.
ಯತೀಂದ್ರ ಹೇಳಿಕೆ ವಿಚಾರವಾಗಿ, ಮಹಾರಾಜರು ಸಮಾಜ ಸುಧಾರಕರು. ಸಿದ್ದರಾಮಯ್ಯ ಕೂಡಾ ಸಮಾಜ ಸುಧಾರಕರು. ಕಳೆದ ಮೂವತ್ತು ವರ್ಷದಲ್ಲಿ ಸಿದ್ದರಾಮಯ್ಯ ಅನೇಕ ಕೆಲಸ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಹೋಲಿಕೆ ಮಾಡಿರಬಹುದು. ಅವರ ವ್ಯಕ್ತಿತ್ವ ಅವರಿಗೆ ಇರುತ್ತೆ. ಇವರ ವ್ಯಕ್ತಿತ್ವ ಇವರಿಗೆ ಇರುತ್ತದೆ. ಇದನ್ನು ದೊಡ್ಡದು ಮಾಡುವ ಅಗತ್ಯ ಇಲ್ಲ ಎಂದಿದ್ದಾರೆ.