ಬೆಳಗಾವಿ: ಸಿಎಂ ಕುಮಾರಸ್ವಾಮಿ ಅಳಬಾರದಂತೆನಿಲ್ಲ. ಸನ್ನಿವೇಶ, ಸಂದರ್ಭಕ್ಕೆ ತಕ್ಕಂತೆ ಅಲ್ಲಿ ಏನಾದ್ರೂ ಆಗಿರಬಹುದು. ಅವರಿಗೆ ಶಕ್ತಿ ಕಡಿಮೆ, ಭಾರ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸಿಎಂ ಎಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಅವರು, ಒಂದು ಕಡೆ ಕಾಂಗ್ರೆಸ್ ಅವರ ಸಮಸ್ಯೆ ಕೇಳಬೇಕು, ಮತ್ತೊಂದು ಕಡೆ ಬಿಜೆಪಿಯರು ವಿರೋಧ ವ್ಯಕ್ತಪಡಿಸುತ್ತಾರೆ. ಸಿಎಂ ಅದನ್ನು ಸಹಿಸಿಕೊಳ್ಳಬೇಕು. ರಾಜ್ಯದ ಜನರ ಸಮಸ್ಯೆ ಇರುತ್ತೆ, ಹೀಗಾಗಿ ಒಬ್ಬ ವ್ಯಕ್ತಿಗೆ ಕೆಲಸ ಮಾಡಲು ಇತಿಮಿತಿ ಇರುತ್ತೆ. ಆದರೆ ಸಿಎಂ ಗೆ ಹೆಚ್ಚು ಕೆಲಸವಿದೆ ಹೀಗಾಗಿ ಅದರ ಒತ್ತಡದಿಂದ ಅತ್ತಿರಬಹುದು. ಅದನ್ನು ಹೆಚ್ಚು ವ್ಯಾಖ್ಯಾನ ಮಾಡುವುದು ಸರಿಯಲ್ಲ. ಅಳುವುದು ಬಿಡುವುದು ಅವರ ವೈಯಕ್ತಿಕ ಎಂದು ವಿಪಕ್ಷ ನಾಯಕರಿಗೆ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದರು.
ಇದೇ ವೇಳೆ ಮಾಜಿ ಸಿಎಂ ಬಿಎಸ್‍ವೈ ಗೆ ಪರೋಕ್ಷ ಟಾಂಗ್ ಕೊಟ್ಟ ಅವರು, ವಿರೋಧ ಪಕ್ಷದವರು ಅಧಿಕಾರದಲ್ಲಿದ್ದ ಹಾಗೂ ಇಲ್ಲದ ಸಂದರ್ಭದಲ್ಲಿ ಕಣ್ಣೀರಿಟ್ಟಿದ್ದಾರೆ. ಬಹಳಷ್ಟು ಜನ ರಾಜಕಾರಣಿಗಳು ಕಣ್ಣೀರು ಹಾಕಿದ್ದಾರೆ. ಸಿಎಂ ಕುಮಾರಸ್ವಾಮಿ ಅವರಿಗೆ ಎಲ್ಲಾ ರೀತಿಯಿಂದ ಸಹಕಾರ ಕೊಡುತ್ತೇವೆ. ಒಳ್ಳೆ ಸರ್ಕಾರ ಕೊಡುವುದೇ ನಮ್ಮ ಉದ್ದೇಶ ಎಂದರು.
ಉತ್ತರ ಕರ್ನಾಟಕ ಅನ್ಯಾಯದ ಕುರಿತು ಶ್ವೇತ್ರಪತ್ರ ಹೊರಡಿಸುವ ವಿಚಾರ ಪ್ರತಿಕ್ರಿಯೆ ನೀಡಿ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಹೇಳಿದಂತೆ ಶ್ವೇತಪತ್ರ ಹೊರಡಿಸಲಿ. ಇದಕ್ಕೆ ನಮ್ಮ ಆಗ್ರಹವಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅನುದಾನ ಕೊಟ್ಟಿದ್ದಾರೆ. ಈ ಬಜೆಟ್ ನಲ್ಲಿ ಅನ್ಯಾಯವಾಗಿದ್ದರೆ ಮತ್ತೆ ಅನುದಾನ ಪಡೆಯಬಹುದು ಎಂದು ಹೇಳಿದರು.
ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಟಾಂಗ್: ಬಿಜೆಪಿ ಹುಲಿ ಇದ್ದಂತೆ ಕಾಂಗ್ರೆಸ್ ಇಲಿ ಎನ್ನುವಂತೆ ಮಾತನಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ಏಕವಚನದಲ್ಲಿ ತಿರುಗೇಟು ಕೊಟ್ಟ ಅವರು, ಅವನು ಹೇಳ್ತಾನೆ ಇರ್ತಾನೆ. ಈ ರೀತಿ ಅನಾವಶ್ಯಕ ಮಾತು ಸೃಷ್ಟಿ ಮಾಡುವುದು ಹೊಸದೇನು ಅಲ್ಲ. ಜಾತಿ, ಧರ್ಮ, ಆಹಾರ, ಅಭಿವೃದ್ಧಿಯಲ್ಲಿ ಅನವಶ್ಯಕ ಗೊಂದಲ ಉಂಟುಮಾಡುತ್ತಾನೆ. ಅವನ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.