ಬೆಂಗಳೂರು: ಟ್ರಬಲ್ ಶೂಟರ್ ಡಿಕೆಶಿಯ ಹಳೆಯ ದುಷ್ಮನ್ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗಿ ಸಚಿವರಾಗುವಾಗ ಈ ಹಿಂದೆ ವಿಧಾನಸೌಧದಲ್ಲಿ ಡಿಕೆಶಿ ಸಚಿವರಾಗಿದ್ದ ಕೊಠಡಿಯೇ ಬೇಕು ಎಂದು ಸಡ್ಡು ಹೊಡೆದು ಸುದ್ದಿಯಾಗಿದ್ದರು. ಈಗಲೂ ಕಾಂಗ್ರೆಸ್ಸಿನಲ್ಲೇ ಇರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನನಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕು ಎಂದು ಪಟ್ಟು ಹಿಡಿದು ಸದ್ದು ಮಾಡತೊಡಗಿದ್ದಾರೆ.
ಹಿಂದೆ ಡಿಕೆಶಿ ಬೆಳಗಾವಿ ರಾಜಕಾರಣದಲ್ಲಿ ಕೈ ಆಡಿಸಿ ಜಾರಕಿಹೊಳಿ ಸಹೋದರರ ಕೆಂಗಣ್ಣಿಗೆ ಗುರಿಯಾದವರು. ಈಗ ಕೆಪಿಸಿಸಿ ಪಟ್ಟಕ್ಕಾಗಿ ನಿರ್ಣಾಯಕ ಹೋರಾಟ ಆರಂಭಿಸಿರುವ ಡಿಕೆಶಿ ಶತಾಯಗತಾಯ ಆ ಸ್ಥಾನ ಪಡೆಯುವ ಹಟಕ್ಕೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಹಳೆಯ ಸಿಟ್ಟನ್ನು ಮರೆಯದ ಸತೀಶ್ ಜಾರಕಿಹೊಳಿ ಕೆಪಿಸಿಸಿ ಪಟ್ಟಕ್ಕಾಗಿ ಪ್ರಬಲವಾದ ಲಾಬಿ ಮಾಡುತ್ತಿದ್ದಾರೆ.
Advertisement
Advertisement
ಮೂರು ಬಾರಿ ದೆಹಲಿಗೆ ಹೋಗಿ ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಲಾಬಿ ಮಾಡಿ ಬಂದಿದ್ದಾರೆ. ನಾನು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇನೆ ನನಗೆ ಅವಕಾಶ ಕೊಡಿ ಎಂದು ಕೇಳುತ್ತಿದ್ದಾರೆ. ತಮ್ಮ ಹಳೆ ದುಷ್ಮನ್ ಡಿಕೆಶಿಗೆ ಟಕ್ಕರ್ ಕೊಡೋಕೆ ಮಾಡುತ್ತಿರುವ ಪ್ರಯತ್ನ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ನಡುವಿನ ನಾನಾ ನೀನಾ ಆಟದಲ್ಲಿ ಕೆಪಿಸಿಸಿ ಪಟ್ಟ ಯಾರ ಪಾಲಾಗಲಿದೆ ಎನ್ನುವುದೇ ಸದ್ಯದ ಕುತೂಹಲ.