ಬೆಳಗಾವಿ: ಗೋಕಾಕ್ ಉಪಚುನಾವಣೆ ಪ್ರಚಾರದ ಟೆನ್ಷನ್ ನಡುವೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಕ್ಕಳೊಂದಿಗೆ ಮೀನು ಹಿಡಿದು ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.
ಜಿಲ್ಲೆಯ ಗೋಕಾಕ್ ನಗರದ ಯೋಗಿ ಕೊಳ್ಳದಲ್ಲಿ ಸತೀಶ್ ಜಾರಕಿಹೊಳಿ ಮೀನು ಹಿಡಿದಿದ್ದಾರೆ. ಕಳೆದ ಮೂರು ತಿಂಗಳಿನಿಂದ ಉಪಚುನಾವಣೆ ಹಿನ್ನೆಲೆ ಗೋಕಾಕ್ ಕ್ಷೇತ್ರದಲ್ಲಿ ಸತೀಶ್ ಅವರು ನಿರಂತರ ಸುತ್ತಾಟದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ದೀಪಾವಳಿ ಹಬ್ಬ ನಿಮಿತ್ತ ತಮ್ಮ ಓಡಾಟಕ್ಕೆ ಸತೀಶ್ ಕೊಂಚ ಬ್ರೇಕ್ ಕೊಟ್ಟಿದ್ದಾರೆ. ಫುಲ್ ರಿಲ್ಯಾಕ್ಸ್ ಆಗಿ ಮಕ್ಕಳ ಜೊತೆ ಸೇರಿ ಮೀನು ಹಿಡಿದು ಖುಷಿಪಟ್ಟಿದ್ದಾರೆ.
ಇತ್ತ ಗೋಕಾಕ್ ಉಪಚುನಾವಣೆಗೆ ಸ್ಪರ್ಧಿಸಲು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಪ್ಲಾನ್ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಅನರ್ಹತೆ ಅರ್ಜಿ ವಿಚಾರಣೆ ಮುಗಿಸಿದ್ದು, ತೀರ್ಪು ಕಾಯ್ದಿರಿಸಿದೆ. ತೀರ್ಪು ಹೇಗಿದ್ದರೂ ಚುನಾವಣೆಗೆ ನಿಲ್ಲುವ ಅವಕಾಶವಿದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ವಾದ ಪ್ರತಿವಾದ ನೋಡಿದರೆ ಚುನಾವಣೆಗೆ ಅವಕಾಶ ನಿಲ್ಲುವ ಅವಕಾಶ ದೊರೆಯುವ ಭಾವನೆಯಿದೆ. ಚುನಾವಣೆ ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಈ ಹಿಂದೆ ರಮೇಶ್ ಜಾರಕಿಹೊಳಿ ಹೇಳಿದ್ದರು.
ಹಾಗೆಯೇ ಸಹೋದರ ಸತೀಶ್ ಜಾರಕಿಹೊಳಿ ವಿರುದ್ಧವೂ ವಾಗ್ದಾಳಿ ನಡೆಸಿ, ಸತೀಶ್ ಮಾಡಿರುವ ದ್ರೋಹವನ್ನು ಕಥೆ ಮಾಡಿದರೆ ಅವನು ಮನೆಗೆ ಓಡಿಹೋಗುತ್ತಾನೆ. ಹುಚ್ಚನಂತೆ ಓಡಾಡುತ್ತಾ ಹೇಳಿಕೆ ನೀಡುತ್ತಿದ್ದಾನೆ. ಅವನನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕಿತ್ತು. ಅವನೊಬ್ಬ ನಾಯಕನಲ್ಲ, ಅವನೊಬ್ಬ ಷಂಡ ಎಂದು ಏಕವಚನದಲ್ಲೇ ಗುಡುಗಿದ್ದರು.
ಜಾರಕಿಹೊಳಿ ಕುಟುಂಬಕ್ಕೆ ಅಪಮಾನ ಮಾಡಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ. ನಾನು ಮತ್ತು ಬಾಲಚಂದ್ರ ಜಾರಕಿಹೊಳಿ ಒಂದೇ ವೇದಿಕೆಯಲ್ಲಿ ಬಂದಾಗ ಸತೀಶ್ ಜಾರಕಿಹೊಳಿ ಮಾತುಗಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಕಿಡಿಕಾರಿದ್ದರು.