Connect with us

ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ಸತೀಶ್ ಜಾರಕಿಹೊಳಿ

ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ಖರೀದಿಸಿದ ಸತೀಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿವೆ. ಅದರ ಜೊತೆಗೆ ಕೆಲ ಪ್ರಮುಖ ನಾಯಕರು ಸಹ ರಾಜ್ಯಾದ್ಯಂತ ಪ್ರವಾಸಕ್ಕೆ ತಮ್ಮದೇ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಬೆಳಗಾವಿಯ ಪ್ರಭಾವಿ ನಾಯಕರೊಬ್ಬರು ಇದೀಗ ಚುನಾವಣೆ ಪ್ರಚಾರಕ್ಕಾಗಿ ಹೆಲಿಕಾಪ್ಟರ್ ತರಿಸಿರೋದು ವಿಶೇಷವಾಗಿದೆ.

ಕುಂದಾ ನಗರಿ ಬೆಳಗಾವಿಯಲ್ಲಿ ಈ ಬಾರಿ ಚುನಾವಣೆಯ ಪ್ರಚಾರದ ಕಾವು ರಂಗೇರಲಿದೆ. ಜಿಲ್ಲೆಯ ಪ್ರಮುಖ ನಾಯಕ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಪ್ರಚಾರಕ್ಕೆ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಈ ಬಾರಿ ರಾಜ್ಯಾದ್ಯಂತ ತೆರಳಿ ಪಕ್ಷದ ಸಂಘಟನೆಗಾಗಿ ಹೆಲಿಕಾಪ್ಟರ್ ವೊಂದನ್ನು ಖರೀದಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ.

ಬೆಳಗಾವಿ ನಗರ, ಯಮಕನಮರಡಿ ಕ್ಷೇತ್ರದ 8 ಸ್ಥಳಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇನ್ಮುಂದೆ ಸತೀಶ್ ಜಾರಕಿಹೊಳಿ ಈ ಹೆಲಿಕಾಪ್ಟರ್ ನಲ್ಲಿಯೇ ರಾಜ್ಯ ಪ್ರವಾಸ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ. ಬೆಲ್ ಕಂಪೆನಿಯ ಈ ಹೆಲಿಕಾಪ್ಟರ್ ನಲ್ಲಿ 5 ಜನ ಪ್ರಯಾಣಿಸಬಹುದಾಗಿದೆ.

2013ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಪ್ರಚಾರಕ್ಕೆ ಹೆಲಿಕಾಪ್ಟರ್ ಬಳಕೆ ಮಾಡಿದ್ದರು. ಆಗ ಬಾಡಿಗೆ ರೂಪದಲ್ಲಿ ಹೆಲಿಕಾಪ್ಟರ್ ತಂದಿದ್ದರು. ಆದರೆ ಈ ಬಾರಿ ಸ್ವತಃ ಹೆಲಿಕಾಪ್ಟರ್ ಖರೀದಿಸಿ ಚುನಾವಣೆ ಪ್ರಚಾರ ನಡೆಸಲಿದ್ದಾರೆ.

 

ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಪಕ್ಷದ ಪರ ಚುನಾವಣೆ ಪ್ರಚಾರ ನಡೆಸಲಿದ್ದಾರೆ. ಈ ಬಾರಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸತೀಶ್ ಶ್ರಮಿಸಲಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಆಪ್ತರು ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ರಾಜಕೀಯ ಕೆಲಸಗಳ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳಿಗೂ ಹೆಲಿಕಾಪ್ಟರ್ ಬಳಸಲಿದ್ದಾರೆ. ಮೂಢನಂಬಿಕೆ ವಿರುದ್ಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲಿ ಗಮನ ಸೆಳೆದಿದ್ದಾರೆ.

Advertisement
Advertisement