ದಾವಣಗೆರೆ: ಈಗಿರೋದು ಸಾಕಾಗಲ್ಲ, ಇನ್ನೊಂದಿಷ್ಟು ಗಂಟು ಮಾಡ್ಬೇಕು ಅನ್ನೋರೇ ಜಾಸ್ತಿ. ಅದರಲ್ಲೂ ನನಗೂ ಬೇಕು ನನ್ನ ಮಕ್ಕಳು, ಮೊಮ್ಮಕ್ಕಳಿಗೂ ಬೇಕು ಅನ್ನೋ ಸ್ವಾರ್ಥಿಗಳೇ ಹೆಚ್ಚು. ಆದ್ರೆ ಇಲ್ಲೊಬ್ರು ತಿಂಗಳಿಗೆ ಲಕ್ಷಾಂತರ ರೂಪಾಯಿ ದುಡಿದರೂ ತಾನು ಹುಟ್ಟಿದ ಊರಿಗೆ ಏನಾದ್ರೂ ಕೊಡುಗೆ ನೀಡಬೇಕು ಅಂತಾ ಕೆಲಸ ಮಾಡ್ತಿದ್ದಾರೆ.
ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮದ ಸತೀಶ್ ಕುಮಾರ್ ಎಂಬವರು ಮಕ್ಕಳಿಗೆ ನೀತಿಪಾಠ ಹೇಳ್ತಾ, ಗ್ರಾಮದ ಏಳಿಗೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸಿವಿಲ್ ಎಂಜಿನಿಯರ್ ಆಗಿರೋ ಸತೀಶ್, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ತಂದೆ ಶಿಕ್ಷಕರಾಗಿದ್ದು ಅವರ ಮಾರ್ಗದರ್ಶನದಲ್ಲಿ ಬೆಳೆದ ಸತೀಶ್, ತಮ್ಮೂರಿನ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಇವರ ಊರಿನ ಕಿರಾಣಿ ಅಂಗಡಿ ಹಾಗೂ ಮನೆಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರು. ಸತೀಶ್ ಹೋರಾಟ ಮಾಡಿ ಶೇ. 70 ರಷ್ಟು ಮದ್ಯ ಮಾರಾಟವನ್ನು ನಿಯಂತ್ರಣ ಮಾಡಿದ್ದಾರೆ.
Advertisement
ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಾನ್ವೆಂಟ್ ಶುರು ಮಾಡಿ ಖಾಸಗಿ ಶಾಲೆ ಮೀರಿಸುವಂತೆ ಶಿಕ್ಷಣ ಕೊಡುತ್ತಿದ್ದಾರೆ. ತಿಂಗಳಿಗೆ ಐದಾರು ದಿನ ಕೆಲಸಕ್ಕೆ ರಜೆ ಹಾಕಿ ಇಲ್ಲಿಯ ಶಾಲಾ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ. ತಾವು ದುಡಿದ ಸಂಬಳದಲ್ಲಿ ಅರ್ಧದಷ್ಟು ದುಡ್ಡನ್ನು ಗ್ರಾಮದ ಉದ್ಧಾರಕ್ಕಾಗಿ ಮೀಸಲಿಟ್ಟಿದ್ದಾರೆ.
Advertisement
ಒಟ್ಟಿನಲ್ಲಿ ಪಟ್ಟಣ ಸೇರಿದವರೆಲ್ಲಾ ಹುಟ್ಟಿದ ಊರನ್ನೇ ಮರೆಯೋ ಈ ಕಾಲದಲ್ಲಿ ಸತೀಶ್ ನಿಜಕ್ಕೂ ನಮಗೆ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ.