InternationalLatestMain Post

‘ಕಿಮ್ ಜೀವಂತವಾಗಿದ್ದಾರೆ’ – ಉಪಗ್ರಹ ಚಿತ್ರ ಸಾಕ್ಷಿಯಂತೆ

ವಾಷಿಂಗ್ಟನ್: ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಜೀವಂತವಾಗಿದ್ದಾರಾ ಅಥವಾ ಮೃತಪಟ್ಟಿದ್ದಾರಾ ಎನ್ನುವ ಪ್ರಶ್ನೆಗೆ ಇಲ್ಲಿಯವರೆಗೆ ಉತ್ತರ ಕೊರಿಯಾದ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಈಗ ಪೂರ್ವ ಕರಾವಳಿಯ ವೊನ್ಸನ್ ನಲ್ಲಿ ನಿಂತಿದ್ದ ರೈಲಿನ ಬಗ್ಗೆ ಉಪಗ್ರಹ ಚಿತ್ರವೊಂದು ಪ್ರಕಟವಾಗಿದೆ.

ಕಿಮ್ ಜಾಂಗ್ ಮೃತಪಟ್ಟಿದ್ದಾರೆ ಎಂದು ಜಪಾನ್ ಮಾಧ್ಯಮಗಳು ಭಾನುವಾರ ಸುದ್ದಿ ಪ್ರಕಟಿಸಿತ್ತು. ಆದರೆ ದಕ್ಷಿಣ ಕೊರಿಯಾ ಸರ್ಕಾರ ಕಿಮ್ ಜಾಗ್ ಮೃತಪಟ್ಟಿಲ್ಲ ಎಂದು ಪ್ರಕಟಣೆ ನೀಡಿತ್ತು. ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ. ಏ.13 ರಿಂದ ವೋನ್ಸಾನ್ ನಲ್ಲಿ ಇದ್ದಾರೆ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇಯ್ ಇನ್ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೂನ್ ಚುಂಗ್ ಇನ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ದಕ್ಷಿಣ ಕೊರಿಯ ಸರ್ಕಾರ ಅಧಿಕೃತ ಹೇಳಿಕೆ ನೀಡಿದ್ದರೂ ಈಗ ಕಿಮ್ ಅವರ ಖಾಸಗಿ ರೈಲಿನ ಬಗ್ಗೆ ಚರ್ಚೆ ಆರಂಭವಾಗಿದೆ. ಖಾಸಗಿ ಉಪಗ್ರಹ ವೊನ್ಸನ್ ರೈಲ್ವೇ ನಿಲ್ದಾಣದಲ್ಲಿ ಕಿಮ್ ಅವರ ರೈಲು ನಿಂತಿದ್ದ ಚಿತ್ರವನ್ನು ತೆಗೆದಿದೆ.

250 ಮೀಟರ್ ಉದ್ದದ ರೈಲು ನಿಲ್ದಾಣದಲ್ಲಿ ನಿಂತರೂ ಅರ್ಧ ಭಾಗ ಹೊರಗಡೆ ಕಾಣುತ್ತದೆ. ಈ ರೈಲು ಏ.15 ರಂದು ಕಾಣಿಸಿರಲಿಲ್ಲ. ಆದರೆ ಏ. 21 ಮತ್ತು ಏ.23 ರಂದು ಕಾಣಿಸಿತ್ತು. ಕಿಮ್ ಜಾಂಗ್ 2014ರಲ್ಲಿ ಅಧಿಕಾರಕ್ಕೆ ಏರಿದ ಬಳಿಕ ವೊನ್ಸನ್ ಕಾಂಪ್ಲೆಕ್ಸ್ ನವೀಕರಣಗೊಂಡಿದೆ. ಶೂಟಿಂಗ್ ರೇಂಜ್, ಕುದುರೆ ಓಡಿಸುವ ಟ್ರ್ಯಾಕ್, ಐಶಾರಾಮಿ ವಿಲ್ಲಾಗಳು ಇಲ್ಲಿ ನಿರ್ಮಾಣಗೊಂಡಿದೆ. ರೈಲು ನಿಂತಿದ್ದ ಹಿನ್ನೆಲೆಯಲ್ಲಿ ಕಿಮ್ ಇಲ್ಲಿ ವಿಶ್ರಾಂತಿ ಪಡೆಯುತ್ತಿರಬಹುದು ಎಂದು ವರದಿಯಾಗಿದೆ.

ಕೆಲ ದಿನಗಳ ಹಿಂದೆ ಕಿಮ್ ಜಾಂಗ್ ಹೃದಯ, ರಕ್ತನಾಳದ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದು, ಅವರ ಆರೋಗ್ಯ ಮತ್ತಷ್ಟು ಕೀಣಿಸಿದೆ ಎನ್ನಲಾಗಿತ್ತು. ಇದೀಗ ಕಿಮ್ ಜಾಂಗ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಚೀನಾ, ಹಾಂಕಾಂಗ್, ಜಪಾನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಉತ್ತರ ಕೊರಿಯಾದ ಸರ್ಕಾರಿ ಟಿವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಿಮ್ ಹೃದಯಕ್ಕೆ ಸ್ಟಂಟ್ ಅಳವಡಿಸುವಾಗ ವೈದ್ಯರ ಕೈ ಭಯದಿಂದ ವಿಪರೀತವಾಗಿ ನಡುಗಿ ಎಡವಟ್ ಆಗಿದೆ. ಇದರಿಂದಲೇ ಕಿಮ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವರದಿಯಾಗಿದೆ.

ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಅವರ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಅವರ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿದೆ ಎಂದು ವರದಿಯಾಗಿದೆ. ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವರದಿಗಳ ಪ್ರಕಾರ ಕಿಮ್ ಏಪ್ರಿಲ್ 15 ರಂದು ನಡೆದ ತನ್ನ ಅಜ್ಜ ಮತ್ತು ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಹುಟ್ಟುಹಬ್ಬದ ಆಚರಣೆಗೂ ಗೈರು ಹಾಜರಾಗಿದ್ದರು. ಅಧಿಕಾರಕ್ಕೆ ಏರಿದ ಬಳಿಕ ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ಗೈರಾಗಿರಲಿಲ್ಲ. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಕೊರಿಯಾ ತಮ್ಮ ದೇಶದ ನಾಯಕರ ಆರೋಗ್ಯದ ವಿಚಾರವನ್ನು ರಾಷ್ಟ್ರದ ಭದ್ರತೆಯ ವಿಚಾರವೆಂದು ಪರಿಗಣಿಸುತ್ತದೆ. ಈ ಕಾರಣಕ್ಕೆ ಕಿಮ್ ಆರೋಗ್ಯ ಬಗ್ಗೆ ಎಲ್ಲಿಯೂ ಸುದ್ದಿ ಪ್ರಕಟವಾಗಿಲ್ಲ.

Leave a Reply

Your email address will not be published.

Back to top button