ರಾಮನಗರ: ರಾಜ್ಯದಲ್ಲಿ ಒಳ್ಳೆಯ ಅಧಿಕಾರಿಗಳು ರಾಜೀನಾಮೆ ನೀಡಿದ್ದು, ಇದರಿಂದ ಜನತೆಗೆ ನಷ್ಟವಾಗಲಿದೆ. ದಕ್ಷ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಅವರು ಈಗ ರಾಜೀನಾಮೆ ನೀಡಿದ್ದು, ಬಿಜೆಪಿ ಸರ್ಕಾರವಿದ್ದರೆ ಪ್ರಾಮಾಣಿಕ ಅಧಿಕಾರಿಗಳು ಬಿಟ್ಟು ಹೋಗದೆ ಮತ್ತೇನು ಮಾಡಲು ಸಾಧ್ಯ ಎಂದು ಎಚ್‍ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಎಚ್‍ಡಿಕೆ, ಸೆಂಥಿಲ್ ಅವರು ಪ್ರಮಾಣಿಕ ಅಧಿಕಾರಿ. ರಾಜೀನಾಮೆ ನೀಡಿರುವ ವಿಚಾರ ಬಗ್ಗೆ ಮಾಹಿತಿ ಪಡೆಯಲು ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು. ಇದನ್ನು ಓದಿ: ಅಕ್ರಮ ಮರಳು ದಂಧೆಗೆ ಬೇಸತ್ತು ಸಸಿಕಾಂತ್ ಸೆಂಥಿಲ್ ರಾಜೀನಾಮೆ?
ಸೆಂಥಿಲ್ ಅವರು ರಾಜೀನಾಮೆ ನೀಡಲು ಕಾರಣ ತಿಳಿದು ಬಂದಿಲ್ಲ. ಇಂತಹ ಅವ್ಯವಸ್ಥೆ ಸರ್ಕಾರ ಇದ್ದರೆ ದಕ್ಷ ಅಧಿಕಾರಿಗಳು ರಾಜೀನಾಮೆ ನೀಡದೆ ಮತ್ತೇನು ಮಾಡಲು ಸಾಧ್ಯ? ಎಂದು ಬಿಜೆಪಿ ಸರ್ಕಾರ ವಿರುದ್ಧ ಕಿಡಿಕಾರಿದರು. ನನ್ನ 14 ತಿಂಗಳ ಅಡಳಿತದಲ್ಲಿ ಅವರ ನಡೆಯನ್ನು ಗಮನಿಸಿದ್ದೇನೆ. ಅವರು ಪ್ರಾಮಾಣಿಕ ಅಧಿಕಾರಿ. ಇಂತಹ ಅಧಿಕಾರಿಗಳ ಸಂಖ್ಯೆಯೇ ಕಡಿಮೆ. ಪ್ರಾಮಾಣಿಕರೇ ರಾಜೀನಾಮೆ ನೀಡಿದರೆ ಎಂದರೆ ದೇಶದ ಯಾವ ಕಡೆ ಸಾಗುತ್ತಿದೆ. ಈ ಹಿಂದೆ ಅಣ್ಣಾ ಮಲೈ ಅವರು ರಾಜೀನಾಮೆಯನ್ನು ಪ್ರಶ್ನೆ ಮಾಡಿ ಮಾಹಿತಿ ಪಡೆದಿದ್ದೆ. ಅಂತಹ ಅಧಿಕಾರಿಗಳು ದೂರ ಹೋದರೆ ಜನರಿಗೆ ನಷ್ಟವಾಗುತ್ತದೆ ಎಂದರು.
ರಾಜ್ಯ ಸರ್ಕಾರಕ್ಕೆ ನೆರೆ ಪೀಡಿತರ ಬಗ್ಗೆ ಚಿಂತೆಯಿಲ್ಲ, ದೇಶದ ಆರ್ಥಿಕ ಪರಿಸ್ಥಿತಿ ಇಳಿದಿರುವ ಬಗ್ಗೆ ಚಿಂತೆ ಇಲ್ಲ. ತುರ್ತು ಪರಿಸ್ಥಿತಿ ಅನಧಿಕೃತವಾಗಿ ಇದ್ದು, ನಾನು ಡಿಕೆ ಶಿವಕುಮಾರ್ ಅವರ ಪರವಾಗಿ ನಿಂತು ಹೋರಾಟ ಮಾಡುತ್ತೇವೆ. ಮನುಷ್ಯತ್ವ ಇರುವವರಿಗೆ ತಾಯಿಯ ದುಃಖ ಅರಿವಾಗುತ್ತದೆ. ಅದಕ್ಕೆ ನಾನು ಸಾಂತ್ವನ ಹೇಳಲು ಬಂದಿದ್ದೇನೆ ಎಂದರು. ಇದನ್ನು ಓದಿ: ಸಿಎಂ, ಪುತ್ರರ ಕಿರುಕುಳದಿಂದ ಸೆಂಥಿಲ್ ರಾಜೀನಾಮೆ: ಹರೀಶ್ ಕುಮಾರ್