ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ಕೈದಿ ಶಶಿಕಲಾಗೆ ಯಾವುದೇ ರಾಜಾತಿಥ್ಯ ನೀಡಲಾಗಿಲ್ಲ. ಡಿಐಜಿ ರೂಪಾ ಅವರ ಆರೋಪಗಳು ಎಲ್ಲವೂ ಸುಳ್ಳು ಎಂದು ಮಹಿಳಾ ಕಾರಾಗೃಹ ಡಿಜಿ ಸತ್ಯನಾರಾಯಣ ರಾವ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೂಪಾ ಅವರು ಬಂದು ಹೊಸದಾಗಿ ಏನು ಡಿಸ್ಕವರಿ ಮಾಡಿಲ್ಲ. ಅವರ ಆರೋಪಗಳು ಎಲ್ಲವೂ ನಿರಾಧಾರ. ವಿಶೇಷ ಚಿಕಿತ್ಸೆಯನ್ನು ಯಾರಿಗೂ ನೀಡಿಲ್ಲ ಎಂದು ಹೇಳಿದರು.
Advertisement
ರೂಪಾ ಅವರಿಗೆ ಜೈಲಿನ ಬಗ್ಗೆ ಏನು ಗೊತ್ತಿದೆ. ಭೇಟಿ ನೀಡುವುದು, ಫೋಟೋ ಕ್ಲಿಕ್ಕಿಸಿ ಮಾಧ್ಯಮಗಳ ಜೊತೆ ಕೂರುವುದು ಅವರ ಕೆಲಸ. ಫೋಟೋ ಕ್ಲಿಕ್ಕಿಸಿ ಮಾಧ್ಯಮದ ಮುಂದೆ ಹೋಗಿದ್ದಕ್ಕೆ ನಾನು ನೋಟಿಸ್ ಕೊಟ್ಟಿದ್ದೆ. ಈ ಮೆಮೋ ಕೊಟ್ಟಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಾರೆ. ನಾನು ಕಚೇರಿಯಲ್ಲಿ ಇರುವ ತನಕ ಟಪಾಲು ಬಂದಿಲ್ಲ. ನಾನು ಹೊರಗೆ ಹೋದ ಮೇಲೆ ಟಪಾಲು ಕೊಟ್ಟಿದ್ದಾರೆ. ಮಾಧ್ಯಮವನ್ನು ಕಂಡರೆ ರೂಪಾ ಅವರಿಗೆ ಇಷ್ಟ ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
ಡಿಜಿ ಸತ್ಯನಾರಾಯಣ ಅವರ ಹೇಳಿಕೆಗಳಿಗೆ ಡಿಐಜಿ ರೂಪಾ ಅವರು ಪ್ರತಿಕ್ರಿಯಿಸಿ, ನಾನು ನಾಲ್ಕು ಪುಟದ ವರದಿ ನೀಡಿದ್ದೇನೆ. ನಾನು ಸುಮ್ಮನೆ ಇದ್ದರೆ ಅದು ತಪ್ಪಾಗುತ್ತದೆ. ನಾನು ನೀಡಿದ ವರದಿ ಸರಿ ಇದೆಯೋ ಇಲ್ಲವೋ ಎನ್ನುವುದಕ್ಕೆ ತನಿಖೆಯಾಗಲಿ. ಇದರಲ್ಲಿ ನನಗೆ ಏನು ವೈಯಕ್ತಿಕ ಲಾಭ ಇಲ್ಲ ಎಂದು ಅವರು ಹೇಳಿದ್ದಾರೆ.
Advertisement
ಏನಿದು ವಿವಾದ?
ಅಕ್ರಮ ಆಸ್ತಿ ಗಳಿಕೆ ಅರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜಯಲಲಿತಾ ಆಪ್ತೆ ಶಶಿಕಲಾಗೆ ಪರಪ್ಪನ ಅಗ್ರಹಾರದಲ್ಲಿ ರಾಯಲ್ ಟ್ರೀಟ್‍ಮೆಂಟ್ ನೀಡಲಾಗುತ್ತಿದ್ದು, ಇದಕ್ಕಾಗಿ ಕಾರಾಗೃಹ ಮಹಾ ನಿರ್ದೇಶಕ ಸತ್ಯನಾರಾಯಣ್ ಅವರಿಗೆ 2 ಕೋಟಿ ಲಂಚ ನೀಡಿರುವ ಆರೋಪ ಕೇಳಿ ಬಂದಿದೆ.
Advertisement
ಲಂಚ ಪಡೆದು ಶಶಿಕಲಾಗೆ ಜೈಲಿನಲ್ಲಿ ರಾಯಲ್ ಟ್ರೀಟ್‍ಮೆಂಟ್ ನೀಡುವುದರ ಜೊತೆಗೆ ಪ್ರತ್ಯೇಕ ಅಡುಗೆ ಮನೆಯನ್ನು ನಿರ್ಮಿಸಿಕೊಡಲಾಗಿದೆ ಎಂದು ಜೈಲು ಉಪ ನಿರೀಕ್ಷಕಿ ಡಿ. ರೂಪ ಅವರು ನೀಡಿರುವ ವರದಿಯಲ್ಲಿ ಉಲ್ಲೇಖವಾಗಿದೆ. ಇಷ್ಟೇ ಅಲ್ಲದೆ ಛಾಪಾಕಾಗದ ಹಗರಣದ ಅರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿಗೆ ಸೇವೆ ಮಾಡಲು ಕೈಗೊಬ್ಬ, ಕಾಲಿಗೊಬ್ಬ ಕೈದಿಗಳನ್ನು ಇರಿಸಲಾಗಿದೆ. ಇದರ ಜೊತೆಗೆ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸೇರಿದಂತೆ ಎಲ್ಲಾ ತರಹದ ಮಾದಕ ವಸ್ತುಗಳು ಸಪ್ಲೈ ಆಗುತ್ತಿದ್ದು ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ 18 ಕೈದಿಗಳನ್ನು ಡ್ರಗ್ ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟೀವ್ ರಿಪೋರ್ಟ್ ಬಂದಿದೆ.
ಈ ವೇಳೆ ವಿಚಾರಣಾಧೀನ ಕೈದಿಯೊರ್ವ ನರ್ಸ್ ಜೊತೆ ಅನುಚಿತ ವರ್ತನೆ ನಡೆಸಿದ್ದಾನೆ ಎನ್ನಲಾಗಿದೆ. ಜೈಲು ಉಪ ನಿರೀಕ್ಷಕಿ ರೂಪರವರು ಇದೇ ತಿಂಗಳ 10ರಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಬಳಿಕ ಹಿರಿಯ ಅಧಿಕಾರಿಗಳಿಗೆ ನೀಡಿರುವ ವರದಿಯಿಂದ ಈ ಎಲ್ಲಾ ಅಕ್ರಮಗಳು ಬಹಿರಂಗವಾಗಿವೆ.
ಹೀಗಾಗಿ ಇಬ್ಬರು ಅಧಿಕಾರಿಗಳು ಮಾಧ್ಯಮಗಳಿಗೆ ಏನು ಹೇಳಿದ್ದಾರೆ ಎನ್ನುವುದನ್ನು ತಿಳಿಸಲು ಇಲ್ಲಿ ವಿಡಿಯೋ ನೀಡಲಾಗಿದೆ.