ಬೆಂಗಳೂರು: ವಿಭಿನ್ನವಾದ ಕ್ರೈಂ ಥ್ರಿಲ್ಲರ್ ಕಥೆಯ ಸುಳಿವು ಕೊಡುತ್ತಲೇ ಪ್ರೇಕ್ಷಕರನ್ನು ಕಾಯುವಂತೆ ಮಾಡಿದ್ದ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ತೆರೆ ಕಂಡಿದೆ. ಒಂದು ಕೊಲೆ ಮತ್ತು ಅದರ ಸುತ್ತ ಬಿಚ್ಚಿಕೊಳ್ಳೋ ರಂಗು ರಂಗಾದ ಕಥನಗಳು ಮತ್ತು ಅದೆಲ್ಲದರ ತಾರ್ಕಿಕ ಅಂತ್ಯವಾಗುವಲ್ಲಿ ಅಮೂಲ್ಯವಾದೊಂದು ಸಂದೇಶ. ಇವಿಷ್ಟು ಎಲಿಮೆಂಟುಗಳೊಂದಿಗೆ ಮಾಮೂಲಿ ಚಿತ್ರಗಳಿಗಿಂತಲೂ ಒಂಚೂರು ವಿಭಿನ್ನವಾಗಿಯೇ ಪ್ರೇಕ್ಷಕರನ್ನು ತಾಕುವಲ್ಲಿ ಸಾರ್ವಜನಿಕರಲ್ಲಿ ವಿನಂತಿ ಯಶ ಕಂಡಿದೆ.
Advertisement
ಇದು ಕೃಪಾ ಸಾಗರ್ ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ಸಂಕೀರ್ಣವಾದ ಕಥೆಯೊಂದನ್ನು ಆರಿಸಿಕೊಂಡಿದ್ದಾರೆ. ಇಲ್ಲಿ ಹಲವಾರು ಘಟನಾವಳಿಗಳ ಗುಚ್ಛವಿದೆ. ಹಳ್ಳಿ ಘಮಲಿನ ಸನ್ನಿವೇಶಗಳಿವೆ. ಚೂರೇ ಚೂರು ಎಡವಟ್ಟಾದರೂ ಸೂತ್ರ ಸಂಬಂಧ ಕಡಿದು ಹೋಗುವಂಥಾ, ಎಚ್ಚರ ತಪ್ಪಿದರೂ ಸಿಕ್ಕಾಗಿ ಬಿಡುವಂಥಾ ಕಥೆಯನ್ನು ಕೃಪಾ ಸಾಗರ್ ಇಲ್ಲಿ ಲೀಲಾಜಾಲವಾಗಿಯೇ ನಿರೂಪಣೆ ಮಾಡಿದ್ದಾರೆ. ಈ ಕಾರಣದಿಂದಲೇ ಸಾರ್ವಜನಿಕರಲ್ಲಿ ವಿನಂತಿ ಹೊಸ ಅಲೆಯ ಚಿತ್ರವಾಗಿ ತಾನೇ ತಾನಾಗಿ ದಾಖಲಾಗುವಷ್ಟು ಪರಿಣಾಮಕಾರಿಯಾಗಿಯೂ ಮೂಡಿ ಬಂದಿದೆ.
Advertisement
Advertisement
ಒಂದು ಹಳ್ಳಿ. ಅದರಲ್ಲಿ ಪ್ರತೀ ಹಳ್ಳಿಗಳಲ್ಲಿರುವಂಥಾದ್ದೇ ಒಂದು ಹುಡುಗರ ಗುಂಪು. ಅದರಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸವಿದೆಯೋ ಇಲ್ಲವೋ. ಆದರೆ ಅವರೆಲ್ಲರಿಗೂ ಒಂದೊಂದು ಲವ್ವಿರುತ್ತೆ. ಅಂಥಾ ಲವ್ವಿನ ಹಿನ್ನೆಲೆಯೊಂದಿಗೇ ತೆರೆದುಕೊಳ್ಳುವ ಕಥೆಯನ್ನು ನಿರ್ದೇಶಕರು ಜಾಣ್ಮೆಯಿಂದಲೇ ಕ್ರೈಂ ಥ್ರಿಲ್ಲರ್ ಟ್ರ್ಯಾಕಿನತ್ತ ಹೊರಳಿಸಿದ್ದಾರೆ. ಈ ಹುಡುಗರ ಗುಂಪಿನ ಪರಮ ಸೋಮಾರಿ ಆಸಾಮಿಗೆ ಹೇಗೋ ಹುಡುಗಿಯೊಬ್ಬಳು ಸಿಕ್ಕು ಮದುವೆಯೂ ಆಗುತ್ತೆ. ಆದರೆ ಈತನ ವರ್ತನೆಯಿಂದ ರೇಜಿಗೆ ಹುಟ್ಟಿಸಿಕೊಳ್ಳೋ ಆಕೆ ಅಸಮಾಧಾನವನ್ನು ಧರಿಸಿಕೊಂಡೇ ಬದುಕುತ್ತಿರುತ್ತಾಳೆ. ಈ ನಡುವೆ ಅದೇ ಊರ ತೋಟದಲ್ಲೊಂದು ಕೊಲೆ ನಡೆಯುತ್ತದೆ. ಆ ಕೊಲೆ ಕೇಸಲ್ಲಿ ಈ ಸೋಮಾರಿ ಆಸಾಮಿಯನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ಟ್ರೀಟ್‍ಮೆಂಟು ಕೊಡುತ್ತಾರೆ.
Advertisement
ಅಸಲಿಗೆ ಆ ಕೊಲೆಗೂ ಈ ಸೋಮಾರಿಗೂ ಸಂಬಂಧವಿರೋದಿಲ್ಲ. ಅಲ್ಲಿಂದಾಚೆಗೆ ಆ ಕೊಲೆಗೆ ಕಾರಣವೇನೆಂಬುದನ್ನು ಪೊಲೀಸರು ಬೆಂಬೀಳುತ್ತಾರೆ. ಆ ಪೊಲೀಸರ ಹುಡುಕಾಟದೊಂದಿಗೇ ಒಟ್ಟಾರೆ ಕಥೆ ಪ್ರತೀ ಕ್ಷಣವೂ ಕಾತರದಿಂದ ಕಾಯುವಂತೆ ಚಲಿಸುತ್ತದೆ. ಹಾಗಾದರೆ ಆ ಕೊಲೆಗೆ ಕಾರಣವೇನು? ಅದಕ್ಕೂ ಅಂಡಲೆಯೋ ಊರ ಹುಡುಗರಿಗೂ ಸಂಬಂಧವಿರುತ್ತಾ ಎಂಬ ಕುತೂಹಲಕ್ಕೆ ಮಜವಾದ ಉತ್ತರವೇ ಕಾದಿದೆ. ಈ ಮೂಲಕವೇ ನಿರ್ದೇಶಕರಾಗಿ ಕೃಪಾ ಸಾಗರ್ ಕೂಡಾ ಭರವಸೆ ಮೂಡಿಸುವಂಥಾ ಚಿತ್ರವನ್ನೇ ಕಟ್ಟಿ ಕೊಟ್ಟಿದ್ದಾರೆ.
ನಾಯಕನಾಗಿ ಮದನ್ ರಾಜ್ ರಂಗಭೂಮಿಯ ಕಸುವನ್ನೆಲ್ಲ ಒಗ್ಗೂಡಿಸಿಕೊಂಡು ನಟಿಸಿದ್ದಾರೆ. ನಾಯಕಿ ಅಮೃತಾ ಕೂಡಾ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ರಮೇಶ್ ಪಂಡಿತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ಯಾವ ಪಾತ್ರವೂ ಇಲ್ಲಿ ಸುಮ್ಮನೆ ತುರುಕಿದಂತಿಲ್ಲ. ಪ್ರತಿಯೊಂದು ಪಾತ್ರಗಳೂ ಚಿತ್ರದ ಕಥೆಗೆ ಟ್ವಿಸ್ಟು ನೀಡುತ್ತಾ ವೇಗ ಹೆಚ್ಚಿಸುವಂತಿವೆ. ಅನಿಲ್ ಪಿಜೆ ಹಿನ್ನೆಲೆ ಸಂಗೀತ ಮತ್ತು ಅನಿಲ್ ಕುಮಾರ್ ಕೆ ಅವರ ಛಾಯಾಗ್ರಹಣ ಇಡೀ ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿವೆ.
ರೇಟಿಂಗ್: 3.5/5
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]