– ಎಂದಿನಂತೆ ಇರುತ್ತೆ ಕೆಎಸ್ಆರ್‌ಟಿಸಿ, ಬಿಎಂಟಿಸಿ, ಶಾಲೆ
ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್‍ಗೆ 600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಘೋಷಿಸಿವೆ. ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನು ನೀಡಿವೆ. ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ತನಕ ಬಂದ್ ನಡೆಯಲಿದೆ.
ವಿವಿಧ ಸಂಘಟನೆಗಳ ಸದಸ್ಯರು ಬೆಂಗಳೂರಿನ ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್ ವೆರಗೂ ಬೃಹತ್ ಪ್ರತಿಭಟನಾ ಜಾಥಾ ನಡೆಸಲು ತೀರ್ಮಾನಿಸಿವೆ. ಆದರೆ ಟೌನ್‍ಹಾಲ್‍ನಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಪ್ರತಿಭಟನಾಕಾರರು ಕೇಂದ್ರ ರೈಲ್ವೇ ನಿಲ್ದಾಣದಿಂದ ಫ್ರೀಡಂಪಾರ್ಕ್ ವರೆಗೆ ಪ್ರತಿಭಟನೆ ಜಾಥಾ ನಡೆಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.
ಬಂದ್‍ನ ಸ್ವರೂಪ ಹೇಗಿರಲಿದೆ?
> ಎರಡು ಲಕ್ಷ ಆಟೋಗಳು ರಸ್ತೆಗೆ ಇಳಿಯುವುದಿಲ್ಲ
> ಒಂದೂವರೆ ಲಕ್ಷ ಓಲಾ, ಊಬರ್ ಟ್ಯಾಕ್ಸಿ ಸಂಚಾರ ಬಂದ್
> 25 ಸಾವಿರ ಮ್ಯಾಕ್ಸಿಕ್ಯಾಬ್, 10 ಸಾವಿರ ಏರ್‍ಪೋರ್ಟ್ ಟ್ಯಾಕ್ಸಿ
> ಕೆಎಸ್‍ಟಿಡಿಸಿ, ಮೇರು, ಮೆಗಾ ಕ್ಯಾಬ್‍ಗಳಿಂದಲೂ ಬಂದ್‍ಗೆ ಬೆಂಬಲ
> ಸರ್ಕಾರಿ ಕಾರು ಓಡಿಸುವ ಚಾಲಕರು ಬಂದ್‍ಗೆ ಬೆಂಬಲ (ಸಚಿವರಿಗೂ ಬಿಸಿ)
> ನಿಂತಲ್ಲೇ ನಿಲ್ಲಲಿವೆ 9 ಸಾವಿರ ಖಾಸಗಿ ಬಸ್ ಸೇರಿ ಆರು ಲಕ್ಷ ವಾಹನ
> 4 ಲಕ್ಷ ಸದಸ್ಯರಿರುವ ಬೀದಿ ಬದಿ ವ್ಯಾಪಾರಿಗಳ ಸಂಘದಿಂದ ಬೆಂಬಲ
> ಬಟ್ಟೆಯಂಗಡಿ, ಚಾಟ್ಸ್ , ತರಕಾರಿ ಹೂವು ಹಣ್ಣು ಇರಲ್ಲ
> ಬೀದಿ ಬದಿ ಹೋಟೆಲ್, ಚಾಟ್ಸ್ ಇರಲ್ಲ
ಏನೇನು ಇರುತ್ತೆ?
> ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್ ಸೇವೆ (ನೈತಿಕ ಬೆಂಬಲ, ಪರಿಸ್ಥಿತಿ ನೋಡಿಕೊಂಡು ತೀರ್ಮಾನ)
> ನಮ್ಮ ಮೆಟ್ರೋ ರೈಲು ಸೇವೆ
> ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜು (ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ)
> ಬ್ಯಾಂಕ್, ಹೋಟೆಲ್, ಶಾಪಿಂಗ್ ಮಾಲ್ (ನೈತಿಕ ಬೆಂಬಲ)
> ಎಪಿಎಂಸಿ, ಲಾರಿ ಸಂಚಾರ ಯಥಾಸ್ಥಿತಿ ಇರಲಿದೆ (ನೈತಿಕ ಬೆಂಬಲ)
> ಸಿನಿಮಾ ಥಿಯೇಟರ್, ಸಿನಿಮಾ ಶೂಟಿಂಗ್ (ನೈತಿಕ ಬೆಂಬಲ)
> ಎಂದಿನಂತೆ ನಾಳೆಯೂ ಸರ್ಕಾರಿ ಕಚೇರಿ (ಸರ್ಕಾರಿ ನೌಕರರಿಂದ ನೈತಿಕ ಬೆಂಬಲ)
> ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು, ಪೇಪರ್
ಈ ಮಧ್ಯೆ, ಬಳ್ಳಾರಿ ಮತ್ತು ಹಾಸನ ಜಿಲ್ಲೆಯಲ್ಲಿ ಹಲವರು ಸಂಘಟನೆಗಳು ಬಂದ್ ನಡೆಸುವುದಾಗಿ ಹೇಳಿವೆ. ಆದರೆ ಮೈಸೂರು, ಕಲಬುರಗಿ ಸೇರಿದಂತೆ ಬಹುತೇಕ ಜಿಲ್ಲೆಗಳ ಸಂಘಟನೆಗಳು ಬಂದ್‍ಗೆ ನೈತಿಕ ಬೆಂಬಲವನ್ನಷ್ಟೇ ಘೋಷಿಸಿವೆ. ಬಂದ್ ನಡೆಸಲ್ಲ. ಆದರೆ ಸಾಂಕೇತಿಕ ಪ್ರತಿಭಟನೆ ಮಾಡುತ್ತಿವೆ ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
ಮೊದಲ ಬಾರಿಗೆ ನಾಳೆಯ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣ ಹಾಗೂ ಪ್ರವೀಣ್ ಶೆಟ್ಟಿ ಬಣ ಬೆಂಬಲ ನೀಡಿಲ್ಲ. 1999ರಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇವೆ. ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವರದಿ ಜಾರಿ ಆಗಬೇಕು. ಆದರೆ ನಾಳೆಯ ಬಂದ್‍ಗೆ ತಮ್ಮ ಬೆಂಬಲ ಇಲ್ಲ ಎಂದು ಕರವೇ ನಾಯಕರು ಸ್ಪಷ್ಟಪಡಿಸಿದ್ದಾರೆ.
ಬೆಂಗ್ಳೂರು ವಿವಿ ಪರೀಕ್ಷೆ ಮುಂದೂಡಿಕೆ:
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಿದ್ದ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಬಾರದು ಅಂತ ಬೆಂಗಳೂರು ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ಮುಂದೂಡಿ, ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.