ಬೆಂಗಳೂರು: ಕೊರೊನಾ ಪೀಡಿತ ಟೆಕ್ಕಿ ತಂಗಿದ್ದ ಅಪಾರ್ಟ್‌ಮೆಂಟ್ 92 ಮನೆಗಳ ಸದಸ್ಯರಿಗೆ ದಿಗ್ಬಂಧನ ಹೇರಲಾಗಿದೆ.
ಸರ್ಜಾಪುರ ರಸ್ತೆಯ ಜೈನ್ ಹೈಟ್ಸ್ ಅಲ್ಟುರಾ ಅಪಾರ್ಟ್‌ಮೆಂಟ್‌ನ ಸಿ ಸೆವನ್ ಫ್ಲ್ಯಾಟ್ ನಲ್ಲಿ ತನ್ನ ಸ್ನೇಹಿತರ ಜೊತೆ ಟೆಕ್ಕಿ ತಂಗಿದ್ದರು. ಫೆ. 19 ರಿಂದ 21ರ ತನಕ ಈ ಫ್ಲ್ಯಾಟ್ ನಲ್ಲಿದ್ದ ಟೆಕ್ಕಿ ಫೆ.22 ಕ್ಕೆ ತೆಲಂಗಾಣಕ್ಕೆ ತೆರಳಿದ್ದರು.
ಟೆಕ್ಕಿಗೆ ಸೊಂಕು ಪತ್ತೆಯಾದ ಹಿನ್ನಲೆಯಲ್ಲಿ ಅಪಾರ್ಟ್‌ಮೆಂಟ್ ನಲ್ಲಿರುವವರಿಗೆ ವೈದ್ಯರು ದಿಗ್ಬಂಧನ ಹಾಕಿದ್ದಾರೆ. 125 ರೂಮ್ ಗಳಲ್ಲಿ, ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಯಾರನ್ನೂ ಅಪಾರ್ಟ್‌ಮೆಂಟ್ ನಿಂದ ಹೊರಗೆ ಹೋಗಲು ಬಿಡುತ್ತಿಲ್ಲ.
ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಟೆಕ್ಕಿಗಳಿಗೆ ಕಂಪನಿಗಳು ಉದ್ಯೋಗಕ್ಕೆ ಕಚೇರಿಗೆ ಬರಬೇಡಿ ಎಂದು ಹೇಳಿದೆ. ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗಳು ತರಗತಿಗೆ ಬರುವುದು ಬೇಡ ಎಂದು ಶಾಲೆಗಳು ಸೂಚಿಸಿವೆ. ಶಾಲೆಗೆ ಬಂದರೂ ಕೊರೊನಾ ಇಲ್ಲ ಎಂದು ದೃಢಪಡಿಸುವ ಪ್ರಮಾಣಪತ್ರವನ್ನು ತರಬೇಕೆಂದು ಪೋಷಕರಿಗೆ ತಿಳಿಸಿವೆ.
ಟೆಕ್ಕಿಗೆ ಕೊರೊನಾ ಇರುವ ವಿಚಾರ ದೃಢಪಟ್ಟ ಬಳಿಕ ನಿವಾಸಿಗಳನ್ನು ಜಿಮ್ ಗೆ ಸಹ ಸೇರಿಸಿಕೊಳ್ಳುತ್ತಿಲ್ಲ.