ಪತ್ರಕರ್ತ ಹರೀಶ್ ನಟನೆಯ ‘ಕ್ರೆಡಿಟ್ ಕುಮಾರ’ ಚಿತ್ರಕ್ಕೆ ಸರ್ಜಾ ಚಾಲನೆ

Public TV
2 Min Read
Credit Kumar 4

‘ಕ್ರೆಡಿಟ್ ಕುಮಾರ’, ಸ್ಯಾಂಡಲ್ ವುಡ್ ನಲ್ಲಿ ಸೆಟ್ಟೇರಿರುವ ಹೊಸ ಸಿನಿಮಾ. ‘ಬಾಂಡ್ ರವಿ’ ಖ್ಯಾತಿಯ ನಿರ್ದೇಶಕ ಪ್ರಜ್ವಲ್ ಸಾರಥ್ಯದಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ ಇದು. ಈ ಸಿನಿಮಾ ಮೂಲಕ ನಾಯಕನಾಗಿ  ಹರೀಶ್ ಸೀನಪ್ಪ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 10ವರ್ಷಕ್ಕೂ ಅಧಿಕ ಸಮಯ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದ ಹರೀಶ್ (Harish Senappa) ಇದೀಗ ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ. ಮೊದಲ ಹೆಜ್ಜೆಯಾಗಿ ‘ಕ್ರೆಡಿಟ್ ಕುಮಾರ’ (Credit Kumar) ಚಿತ್ರಕ್ಕೆ ಮುಹೂರ್ತ ಮಾಡಿಕೊಳ್ಳುವ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja), ನಿರ್ದೇಶಕ ಎಸ್. ಮಹೇಂದರ್,  ನಿರ್ಮಾಪಕ ಉದಯ್ ಮೆಹ್ತಾ, ಬಾಂಡ್ ರವಿ ಸ್ಟಾರ್ ಪ್ರಮೋದ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು ಶುಭಹಾರೈಸಿದರು.

Credit Kumar 1

ಸಿನಿಮಾಗೆ ಕ್ಲ್ಯಾಪ್ ಮಾಡಿ ಮಾತನಾಡಿದ ಧ್ರುವ ಸರ್ಜಾ, ‘ಹರೀಶ್ ಅವರಿಗೆ ಒಳ್ಳೆದಾಗಬೇಕು, ತುಂಬಾ ಕಷ್ಟಪಟ್ಟಿದ್ದಾರೆ’ ಎಂದರು. ಎಸ್, ಮಹೆಂದರ್ ಮಾತನಾಡಿ, ‘ಪಾಸಿಟಿವ್ ವೈಬ್ ಇದೆ. ಟೈಟಲ್ ತುಂಬಾ ಚೆನ್ನಾಗಿದೆ. ನಿರ್ದೇಶಕ ಪ್ರಜ್ವಲ್ ನಮ್ಮ ಹುಡುಗ. ನನ್ನ ಜೊತೆ ಕೆಲಸ ಮಾಡಿದ ಹುಡುಗ. ಸೆನ್ಸಿಬಲ್ ಇದಾರೆ. ಹರೀಶ್ ಕೂಡ ತುಂಬಾ ಸಮಯದಿಂದ ನೋಡಿದ ಹುಡುಗ.  ನಿರ್ಮಾಪಕರಿಗೆ ನಾನು ಭರವಸೆ ನೀಡುತ್ತೇನೆ ಖಂಡಿತವಾಗಿಯೂ ಈ ಸಿನಿಮಾ ಚೆನ್ನಾಗಿ ಆಗುತ್ತೆ’ ಎಂದು ಹೇಳಿದರು. ನಟ ಪ್ರಮೋದ್ ಮಾತನಾಡಿ, ‘ನಿರ್ದೇಶಕ ಪ್ರಜ್ವಲ್ ಉತ್ತಮ ಕೆಲಸಗಾರ ಹಾಗೂ ಹರೀಶ್ ನನ್ನ ಗೆಳೆಯ ಒಳ್ಳೆದಾಗಲಿ’ ಎಂದರು.

Credit Kumar 2

ಕ್ರೆಡಿಟ್ ಕುಮಾರ ಒನ್ ಲೈನ್ ಸ್ಟೋರಿ ಹೇಳುವುದಾದರೆ ಸಾಲ ಮಾಡಿಕೊಂಡು ಒದ್ದಾಡುವ ಒಬ್ಬ ಕ್ಯಾಬ್ ಡ್ರೈವರ್ ನ ಕಥೆಯಾಗಿದೆ. ಕ್ರೆಡಿಟ್ ಕುಮಾರನಾಗಿ ಹರೀಸ್ ಸೀನಪ್ಪ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿ ಪಾತ್ರದಲ್ಲಿ ಪಾಯಲ್ ಚಂಗಪ್ಪ ಮಿಂಚುತ್ತಿದ್ದಾರೆ. ಕಿರು ಚಿತ್ರಗಳ ಮೂಲಕ ಖ್ಯಾತಿ ಗಳಿಸಿರುವ ಪಾಯಲ್ ಇದೀಗ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಲು ಸಜ್ಜಾಗಿದ್ದಾರೆ.  ಕ್ರೆಡಿಟ್ ಕುಮಾರ ಸಿನಿಮಾ ಮೂಲಕ ನಿರ್ಮಾಪಕರಾಗಿ ವಾಗೀಶ್ ಮುತ್ತಿಗೆ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.

Credit Kumar 3

ನಾಯಕಿ ಪಾಯಲ್ ಮಾತನಾಡಿ, ‘ಭೂಮಿ ಎನ್ನುವ ಪಾತ್ರದಲ್ಲಿ ಮಾಡುತ್ತಿದ್ದೇನೆ.  ಶಾರ್ಟ್ ಸಿನಿಮಾ ಮಾಡಿದ್ದೇನೆ. ತುಂಬಾ ಪ್ರೀತಿ ಕೊಟ್ಟಿದ್ದೀರಾ. ಇವಾಗ ಸಿನಿಮಾ ಮಾಡುತ್ತಿದ್ದೇನೆ. ಎಲ್ಲರ ಪ್ರೀತಿ ಇರಲಿ. ಮಿಡ್ಲ್ ಕ್ಲಾಸ್ ಹುಡುಗಿ  ಬ್ಯೂಟಿಶಿಯನ್ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದರು. ನಿರ್ದೇಸಾಕ ಪ್ರಜ್ವಲ್ ಮಾತನಾಡಿ, ‘ಬಾಂಡ್ ರವಿ ಅಂತ ಸಿನಿಮಾ ಮಾಡಿದ್ದೆ. ಆ ಸಿನಿಮಾಗೆ ಸಿಕ್ಕ ಪ್ರಶಂಸೆಯಿಂದ ಈಗ ಮತ್ತೊಂದು ಸಿನಿಮಾ ಮಾಡುವಂತೆ ಆಗಿದೆ. ಸಾಲ ಮಾಡಿಕೊಂಡು ಬದುಕುವ ಒಬ್ಬ ಯುವಕನ ಕಥೆ. ಹರೀಶ್ ಅವರಿಗಂತನೇ ಈ ಕಥೆ ಮಾಡಿದ್ದು’ ಎಂದರು.

ನಾಯಕ ಹರೀಶ್ ಮಾತನಾಡಿ, ‘ಇಡೀ ಸಿನಿಮಾರಂಗ ಸಹಾಯ ಮಾಡಿದೆ. ಇದು ಮೊದಲ ಹೆಜ್ಜೆ. 2009ರಲ್ಲಿ ಮೊದಲು ಕೇಬಲ್ ಚಾನಲ್ ನಲ್ಲಿ ಕೆಲಸ ಮಾಡುವಾಗ ಬಣ್ಣ ಹಚ್ಚಿದ್ದು ಅವತ್ತು ಆರ್ಟಿಸ್ಟ್ ಆಗಬೇಕು ಅಂತ ಅಂದುಕೊಂಡಿದ್ದೆ. ಈಗ ಆ ಕನಸು ನನಸಾಗಿದೆ. ಈ ಅನುಭವ ನನಗೆ ಬೇಕಿತ್ತು, ಈ ಅನುಭವ ಇಲ್ಲ ಅಂದಿದ್ರೆ ನನ್ನ ಜೀವನ ಅಪೂರ್ಣ ಆಗುತ್ತಿತ್ತು’ ಎಂದರು. ಇನ್ನು ಈ ಸಿನಿಮಾಗೆ ಧರ್ಮ ವಿಶ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಹಾಡುಗಳು ಇರಲಿದ್ದು ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರುವಂತೆ ಹಾಗೂ ಭರ್ಜರಿ ಚೇತನ್ ಸಾಹಿತ್ಯ ಇರಲಿದೆ ಎಂದು ಧರ್ಮ ವಿಶ್ ಹೇಳಿದರು. ಸದ್ಯ ಮುಹೂರ್ತ ಮಾಡಿಕೊಂಡಿರುವ ಸಿನಿಮಾ ಮುಂದಿನ ದಿನಗಳಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ.

Share This Article