ಧಾರವಾಡ: ಸೀರೆ ಅನ್ನೋದು ಭಾರತೀಯ ಮಹಿಳೆಯರಿಗೆ ಅಚ್ಚುಮೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಸೀರೆ ಕೇವಲ ಕೆಲವೇ ಸಂದರ್ಭಗಳಲ್ಲಿ ಉಟ್ಟುಕೊಳ್ತಾರೆ. ಇದೇ ಕಾರಣಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರೋ ಹಿನ್ನೆಲೆಯಲ್ಲಿ ಈ ಭಾರತೀಯ ದಿರಿಸು ಸೀರೆಯನ್ನೇ ಮುಖ್ಯವಾಗಿಟ್ಟುಕೊಂಡು ಧಾರವಾಡದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಬೆಳ್ಳಂಬೆಳಗ್ಗೆ ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು, ಧಾರವಾಡದ ಕರ್ನಾಟಕ ಕಾಲೇಜು ಆವರಣ. ಅಂತಾರಾಷ್ಟ್ರೀಯ ಮಹಿಳಾ ದಿನ ಸಮೀಪಿಸುತ್ತಿರೋ ಹಿನ್ನೆಲೆಯಲ್ಲಿ ಭಾರತೀಯ ಪುರಾತನ ಸಂಪ್ರದಾಯದ ಪ್ರಮುಖ ದಿರಿಸು ಸೀರೆಯನ್ನೇ ಕೇಂದ್ರವಾಗಿಟ್ಟುಕೊಂಡು ನಗರದ ಖಾಸಗಿ ಸಂಸ್ಥೆಯೊಂದು ಮಹಿಳೆಯರಿಗಾಗಿ ಓಟ ಹಾಗೂ ನಡಿಗೆಯ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಒಂದೆಡೆ ನಾ ಮುಂದು ತಾ ಮುಂದು ಅಂತಾ ಓಡುತ್ತಿರೋ ನೀರೆಯರು, ಮತ್ತೊಂದು ಕಡೆ ಸಂಗೀತಕ್ಕೆ ಡ್ಯಾನ್ಸ್ ಮಾಡುತ್ತಿರೋ ಮಹಿಳೆಯರು. ಖುಷಿಯಿಂದ ಬಣ್ಣ ಬಣ್ಣದ ಸೀರೆಯನ್ನುಟ್ಟು ಸಂಭ್ರಮಿಸುತ್ತಿರೋ ಮಹಿಳೆಯರ ಗುಂಪು ಕಾರ್ಯಕ್ರದಲ್ಲಿ ನೆರೆದವರ ಗಮನ ಸೆಳೆಯಿತು.
Advertisement
Advertisement
ಸ್ಪರ್ಧೆಯಲ್ಲಿ ಭಾಗವಹಿಸೋರು ಸೀರೆಯುಟ್ಟುಕೊಳ್ಳೋದು ಕಡ್ಡಾಯ. ಹೀಗೆ ಸೀರೆಯುಟ್ಟುಕೊಂಡು ನಗರದ ಕೆಸಿಡಿ ವೃತ್ತದಿಂದ ಕಲಾಭವನದವರೆಗೆ ಓಡಬೇಕು. ಓಡಲು ಸಾಧ್ಯವಾಗದವರು ನಡೆಯಬೇಕು. ಬೆಳ್ಳಂಬೆಳಗ್ಗೆಯೇ ಈ ಸ್ಪರ್ಧೆಯಲ್ಲಿ 400ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.
Advertisement
ಮೊದಲಿಗೆ ಕಾಲೇಜು ಆವರಣದಲ್ಲಿ ಅರ್ಧ ಗಂಟೆ ಝುಂಬಾ ವ್ಯಾಯಾಮ ಡಾನ್ಸ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ನಿಂತಲ್ಲಿಯೇ ಸಂಗೀತಕ್ಕೆ ಮೈಮುರಿದು ನೃತ್ಯ ಮಾಡಿದರು. ಅದಾದ ಬಳಿಕವೇ ನಡೆಯೋ ಹಾಗೂ ಓಡೋ ಸ್ಪರ್ಧೆ. ಯುವತಿಯರು, ಮಹಿಳೆಯರು, ವೃದ್ಧೆಯರು ನಾ ಮುಂದು ತಾ ಮುಂದು ಅಂತ ಕಾಲೇಜು ರಸ್ತೆಯಲ್ಲಿ ಓಡಿ ಕಲಾಭವನ ತಲುಪಿದರು. ಸೀರೆಯನ್ನುಟ್ಟುಕೊಂಡು ಕೂಡ ಓಡಬಹುದು ಅನ್ನೋದನ್ನು ಮಹಿಳೆಯರು ನಿರೂಪಿಸಿದರು. ಆಯೋಜಕರು ನೂರು ಮಹಿಳೆಯರು ಭಾಗವಹಿಸಬಹುದು ಅಂದುಕೊಂಡಿದ್ದರು. ಆದರೆ ಅದಕ್ಕಿಂತ ಹೆಚ್ಚಿಗೆ ಮಹಿಳೆಯರು ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸಿ, ಆಯೋಜಕರಿಗೆ ಅಚ್ಚರಿ ಮೂಡಿಸಿದರು.
Advertisement
ಇತ್ತೀಚಿನ ದಿನಗಳಲ್ಲಿ ಸೀರೆಯುಟ್ಟುಕೊಳ್ಳೋದು ಹಳೆಯ ಸಂಪ್ರದಾಯ ಅನ್ನೋ ಭಾವನೆ ಬಂದು ಬಿಟ್ಟಿದೆ. ಸೀರೆಗಿಂತ ಜೀನ್ಸ್ ಪ್ಯಾಂಟ್, ಟೀ ಶರ್ಟ್, ಚೂಡಿದಾರ್ ಸಾಕಷ್ಟು ಕಂಫರ್ಟ್ ಕೊಡುತ್ತೆ ಅನ್ನೋ ಭಾವನೆಯಲ್ಲಿ ಯುವತಿಯರಿದ್ದಾರೆ. ಆದರೆ ಭಾರತೀಯ ಸಂಪ್ರದಾಯದ ಪ್ರಮುಖ ದಿರಿಸು ಸೀರೆಯನ್ನುಕೊಂಡರೆ ನಡೆದಾಡೋದೇನು ಓಡಲು ಕೂಡ ಸಾಧ್ಯ ಅನ್ನೋದನ್ನು ಇವತ್ತು ನಡೆದ ಸ್ಪರ್ಧೆ ಎತ್ತಿ ತೋರಿಸಿದ್ದಂತೂ ಸತ್ಯ.