ಇನಾಮ್ದಾರ್… ಇನಾಮ್ದಾರ್… ಇನಾಮ್ದಾರ್ (Inamdar)…ಎಲ್ಲಿ ನೋಡಿದರೂ ಈ ಚಿತ್ರದ್ದೇ ಸದ್ದು ಸುದ್ದಿ. ಕರಾವಳಿ ಭಾಗದ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ (Sandesh Shetty Azri) ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರ, ನೆಲಮೂಲದ ಕಥೆ ಹಾಗೂ ಪಾತ್ರವರ್ಗದಿಂದ ಗಮನ ಸೆಳೆಯುತ್ತಲೇ ಇದೆ. ಹಿರಿಯ ನಟ ಅವಿನಾಶ್, ಥ್ರಿಲ್ಲರ್ ಮಂಜು, ಎಂ.ಕೆ ಮಠ, ಪ್ರಮೋದ್ ಶೆಟ್ಟಿ ಸೇರಿದಂತೆ ಬಹುತಾರಾಗಣವಿರುವ ಈ ಮೂವೀ ಯಲ್ಲಿ ಹಿರಿಯ ನಟ ಶರತ್ ಲೋಹಿತಾಶ್ವ (Sarath Lohitashwa) ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಕಥಾನಾಯಕನಿಗೆ ಸರಿಸಮನಾಗಿ ನಿಲ್ಲುವ ಕ್ಯಾರೆಕ್ಟರ್ ಇದಾಗಿದ್ದು, ಸ್ಪೆಷಲ್ ಪೊಲೀಸ್ ಆಫೀಸರ್ ಪಾತ್ರ ಪೋಷಣೆ ಮಾಡಿದ್ದಾರೆ.
ಕಳೆದ ಎರಡೂವರೆ ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ನಟ ಶರತ್ ಲೋಹಿತಾಶ್ವ ಅವರು ನಾನಾ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ, ಮಲೆಯಾಳಂ ಸೇರಿ ಐದು ಭಾಷೆಯಲ್ಲೂ ಗುರ್ತಿಸಿಕೊಂಡಿರುವ ಇವರು ಬಹು ಬೇಡಿಕೆಯ ಪೋಷಕ ನಟನ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಭಾರತದ ಬಹುತೇಕ ಸೂಪರ್ ಸ್ಟಾರ್ ಗಳ ಜೊತೆ ಧಗಧಗಿಸಿದ್ದು ಈಗ ಹೊಸಬರಿಗೂ ಸಾಥ್ ಕೊಡ್ತಿದ್ದಾರೆ. ಆ್ಯಕ್ಸಿಡೆಂಟ್ ಆಗಿ ಕಾಲಿಗೆ ಆಪರೇಷನ್ ಆಗಿದ್ದರೂ ಕೂಡ ಅದನ್ನು ಲೆಕ್ಕಿಸದೇ ಇನಾಮ್ದಾರ್ ಸಿನಿಮಾದ ಚೇಸಿಂಗ್ ಸೀಕ್ವೆನ್ಸ್ ಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಿರ್ದೇಶಕ ಸಂದೇಶ್ ಶೆಟ್ಟಿ, ಇವತ್ತಿನ ಯಂಗ್ ಸ್ಟಾರ್ಸ್ ಬೆಚ್ಚಿಬೀಳೋ ರೇಂಜ್ ಗೆ ಶರತ್ ಸರ್ ಸಾಹಸ ಮಾಡಿದ್ದಾರೆಂದಿದ್ದಾರೆ.
ನಮ್ಮ ಸಿನಿಮಾದ 70 ಪರ್ಸೆಂಟ್ ಶೂಟಿಂಗ್ ಆಗಿರುವುದು ಕಾಡಲ್ಲೇ. ಕರಡಿ ಗುಡ್ಡ, ನಾಗನಕಲ್ಲು ಬರೆ, ಬೆಳಕಲ್ ಆಸುಪಾಸಿನಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವುದು ಸವಾಲಿನ ಕೆಲಸವೇ. ಅಂತಹ ಕಡೆಯಲೆಲ್ಲಾ ತಂಡದ ಜೊತೆ ಬೆನ್ನೆಲುಬಾಗಿ ನಿಂತು ಶರತ್ ಲೋಹಿತಾಶ್ವ ಕೆಲಸ ಮಾಡಿದ್ರಂತೆ. ಅವರ ಈ ಮನೋಭಾವವನ್ನು ಶ್ಲಾಘಿಸುವ ನಿರ್ದೇಶಕರು, ಹಿರಿಯ ಹಾಗೂ ಕಿರಿಯ ಕಲಾವಿದರ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಎನ್ನುತ್ತಾರೆ.
ಅಂದ್ಹಾಗೇ, ನಮ್ಮ ಮಣ್ಣಿನ ಸೊಗಡು, ನಮ್ಮ ನೆಲದ ಶ್ರೀಮಂತಿಕೆಯನ್ನು ಸಾರುವಂತಹ ಸಿನಿಮಾಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಲವು ನಿರ್ದೇಶಕರು ಶ್ರಮವಹಿಸ್ತಿದ್ದಾರೆ. ಆ ದಿಸೆಯಲ್ಲಿ ಸಾಗಿದ ಸಂದೇಶ್ ಶೆಟ್ಟಿ ಆಜ್ರಿ, ಪಶ್ಚಿಮ ಘಟ್ಟದಲ್ಲಿ ಪರಶಿವನನ್ನು ಆರಾಧಿಸುವ ಬುಡಕಟ್ಟು ಜನಾಂಗ ಹಾಗೂ ಬಯಲು ಸೀಮೆಯಲ್ಲಿ ಶಿವಾಜಿ ಮಹರಾಜ್ ನ ಆರಾಧಿಸುವ ಮನೆತನದ ಕಥೆನಾ ಮುನ್ನಲೆಗೆ ತಂದಿದ್ದಾರೆ. ಎರಡು ಜನಾಂಗದ ನಡುವಿನ ವರ್ಣ ಸಂಘರ್ಷದ ಕಥನವನ್ನು ಇನಾಮ್ದಾರ್ ಒಡಲಲ್ಲಿಟ್ಟು ಜಗತ್ತಿನ ಮುಂದೆ ಹರವಿಡಲು ರೆಡಿಯಾಗಿದ್ದಾರೆ. ನಿರ್ದೇಶನದ ಜೊತೆಗೆ ಕರಡಿ ಕಾಮ ಹಾಗೂ ಕಮರ ಕಾಳ ಹೆಸರಿನ ಪಾತ್ರಗಳನ್ನ ನಿಭಾಯಿಸಿದ್ದಾರೆ.
ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳಿ, ಚಿಕ್ಕಮಂಗಳೂರು, ಕರಾವಳಿ ಭಾಗ ಸುತ್ತಮುತ್ತ ಸುಮಾರು 65 ದಿನ ಶೂಟಿಂಗ್ ಮಾಡಿದ್ದು, ಮುರುಳಿ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಶಿವರಾಜ್ ಮೇಹು ಸಂಕಲನ, ರಾಕಿ ಸೋನು ಸಂಗೀತ, ನಕುಲ್ ಅಭಯಂಕರ್ ಹಿನ್ನಲೆ ಸಂಗೀತ `ಇನಾಮ್ದಾರ್’ಗಿದೆ. ಚಿತ್ರಕಲಾ ರಾಜೇಶ್,ಕಾಂತಾರ ಖ್ಯಾತಿಯ ನಾಗರಾಜ್ ಬೈಂದೂರು, ಪ್ರಶಾಂತ್ ಸಿದ್ದಿ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಸಂಜು ಬಸಯ್ಯ, ಹಾಲಂಬಿಯಂತಹ ಪ್ರತಿಭೆಗಳು ಸಿನಿಮಾದಲ್ಲಿದ್ದಾರೆ. ನಾಯಕ ರಂಜನ್ ಛತ್ರಪತಿ ಗೆ ಚಿರಶ್ರೀ ಅಂಚನ್ ಹಾಗೂ ಎಸ್ತರ್ ನರೋನಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಶ್ರೀ ಕುಂತಿಯಮ್ಮ ಪ್ರೊಡಕ್ಷನ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಫಿಲಂಸ್ ವಿತರಣೆ ಹೊಣೆ ಹೊತ್ತಿದ್ದಾರೆ. ಸುಮಾರು 150 ಥಿಯೇಟರ್ ನಲ್ಲಿ ರಾಜ್ಯಾದ್ಯಂತ ರಿಲೀಸ್ ಮಾಡುವ ಪ್ಲ್ಯಾನ್ ಹಾಕ್ಕೊಂಡಿದ್ದು, ಇದೇ ಅಕ್ಟೋಬರ್ 27ರಂದು ಬೆಳ್ಳಿತೆರೆ ಅಂಗಳಕ್ಕೆ ತರುತ್ತಿದ್ದಾರೆ.
Web Stories