Connect with us

Districts

ಗಲಾಟೆ ವೇಳೆ ನನ್ನ ಸಹೋದರ ಸಂಧಾನಕ್ಕೆ ಹೋಗಿದ್ದೇ ತಪ್ಪು: ಸಾರಾ ಮಹೇಶ್

Published

on

ಮೈಸೂರು: ಮಾಜಿ ಸಚಿವ ಸಾ.ರಾ ಮಹೇಶ್ ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ಸಾಲಿಗ್ರಾಮ ಗಲಭೆ ಪ್ರಕರಣದ ಕುರಿತು ಸ್ಪಷ್ಟೀಕರಣ ನೀಡಿದರು.

ಸಾಲಿಗ್ರಾಮದ ಘಟನೆ ಎರಡು ಜಾತಿಗಳ ನಡುವೆ ನಡೆದಿರುವ ಗಲಭೆ ಅಲ್ಲ. ಅದು ಎರಡು ವ್ಯಕ್ತಿಗಳ ನಡುವೆ ನಡೆದಿರುವ ಗಲಾಟೆ. ದಯಮಾಡಿ ಅದಕ್ಕೆ ಜಾತಿ ಹಾಗೂ ರಾಜಕೀಯ ಬಣ್ಣ ಕಟ್ಟಬೇಡಿ ಎಂದು ಮನವಿ ಮಾಡಿದರು. ಡಿ.11ರ ಸಂಜೆ ಘಟನೆ ನಡೆದಿದ್ದು, ಆದರೆ ದೂರು ದಾಖಲಾಗಿರೋದು ಡಿ.12ರ ಮಧ್ಯರಾತ್ರಿ 12 ಗಂಟೆಗೆ. ಗಲಾಟೆ ನಡೆದಾಗ ನನ್ನ ತಮ್ಮ ಸಾ.ರಾ ರವೀಶ್ ಸ್ಥಳಕ್ಕೆ ಹೋಗಿ ಸಂಧಾನ ಮಾಡಿದ್ದರು. ಆಗ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆಯಾದ ದಿನವೇ ದೂರು ದಾಖಲಾಗಿದ್ದರೆ ಇಷ್ಟು ದೊಡ್ಡ ಸಮಸ್ಯೆ ಆಗುತ್ತಿರಲಿಲ್ಲ ಎಂದು ವಿವರಿಸಿದರು.

ನನ್ನ ತಮ್ಮ ಅಲ್ಲಿಗೆ ಸಂಧಾನಕ್ಕೆ ಹೋಗಿದ್ದು ತಪ್ಪು. ಯಾವ ಸಂದರ್ಭದಲ್ಲಿ ಸಂಧಾನ ಮಾಡಬೇಕು ಎಂಬ ಅರಿವು ನಮಗೆ ಇರಬೇಕು. ಈಗ ಅವನೇ ಪ್ರಕರಣದ ಮೊದಲ ಆರೋಪಿಯಾಗಿದ್ದಾನೆ. ಯಾವ ತನಿಖೆ ಬೇಕಾದರೂ ಆಗಲಿ. ಪ್ರಕರಣವನ್ನ ಸಿಐಡಿ, ಸಿಬಿಐಗೆ ನೀಡಲಿ. ಆದರೆ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದರು.

ನಾನು ಒತ್ತಡ ಹಾಕೋದಾಗಿದ್ದರೆ ತಮ್ಮನ ಮೇಲೆ ಎ1 ಆರೋಪ ಎಂಬ ಪಟ್ಟ ಬರುತ್ತಿತ್ತಾ ಎಂದು ಪ್ರಶ್ನಿಸಿದರು. ಹೊರಗಿನಿಂದ ಬಂದವರು ಸಾಲಿಗ್ರಾಮ ಗಲಾಟೆಯಿಂದ ತಾಲೂಕು ಶಾಂತಿ ಹಾಳು ಮಾಡಬೇಡಿ. ಊರಿನವರನ್ನ ಬಿಟ್ಟು ನಾವು ಇರೋಕಾಗೊಲ್ಲ. ನಮ್ಮನ್ನ ಬಿಟ್ಟು ಅವರು ಇರೋಕಾಗೊಲ್ಲ ಎಂದು ಹೇಳಿದರು.

ಇದೇ ವೇಳೆ ಹುಣಸೂರು ಉಪಚುನಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿ, ಜಿ.ಟಿ ದೇವೇಗೌಡ ಹಾಗೂ ಅವರ ಮಗನ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದು ಮಾಧ್ಯಮಗಳ ಮುಂದೆ ಜಿಟಿಡಿ ಕುರಿತ ಪ್ರಶ್ನೆಗೆ ಕೈ ಮುಗಿದು ಉತ್ತರಿಸಿದರು. ಅವರ ಸಂಬಂಧಿತ ಪ್ರಶ್ನೆಗಳನ್ನು ಅವರನ್ನೆ ಕೇಳಿ. ನಾನು ಅವರ ಬಗ್ಗೆ ಮಾತನಾಡೋಲ್ಲ ಎಂದರು.

Click to comment

Leave a Reply

Your email address will not be published. Required fields are marked *