ಬೆಂಗಳೂರು: ರಾಜ್ಯ ಸರ್ಕಾರ ಮುಜರಾಯಿ ಇಲಾಖೆಯಿಂದ ಸಾಮೂಹಿಕ ವಿವಾಹಕ್ಕೆ ದಿನಾಂಕ ನಿಗದಿ ಮಾಡಿದೆ. ಈ ವರ್ಷದಲ್ಲಿ ಎರಡು ಸಲ ಸಾಮೂಹಿಕ ವಿವಾಹಕ್ಕೆ ಸಿದ್ಧತೆ ನಡೆಸಿದೆ. ವಿಧಾನಸೌಧದಲ್ಲಿ ಇವತ್ತು ಸಪ್ತಪದಿ ಸಾಮೂಹಿಕ ವಿವಾಹದ ಲಾಂಛನವನ್ನು ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಆನಂದ್ ಗುರೂಜೀ ಲಾಂಛನ ಬಿಡುಗಡೆ ಮಾಡಿದರು.
ದೇವಾಲಯದ ಗೋಪುರವನ್ನು ಸಂಕೇತವಾಗಿಟ್ಟುಕೊಂಡು ಲಾಂಛನ ರೂಪಿಸಲಾಗಿದೆ. ವೈವಾಹಿಕ ಜೀವನದ ಏಳು ಹೆಜ್ಜೆಯ ಕಲ್ಪನೆಯ ಆಧಾರದ ಮೇಲೆ ಕಾರ್ಯಕ್ರಮಕ್ಕೆ ‘ಸಪ್ತಪದಿ’ ಎಂದು ಹೆಸರಿಡಲಾಗಿದೆ. ಉತ್ತಮ ಆದಾಯವಿರುವ ಎ ವರ್ಗದ 100 ದೇವಾಲಯಗಳಲ್ಲಿ ಸಾಮೂಹಿಕ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಏಪ್ರಿಲ್ 24ರಂದು ಮೊದಲ ಹಂತದಲ್ಲಿ ಹಾಗೂ ಮೇ 24ರಂದು ಎರಡನೇ ಹಂತದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಲಾಗುತ್ತದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವಧುವಿಗೆ 8 ಗ್ರಾಂ ಚಿನ್ನದ ಮಾಂಗಲ್ಯ ಸೇರಿ, ವಧೂವರರಿಗೆ ವಿವಾಹಕ್ಕೆ ಅಗತ್ಯವಿರುವ ವಸ್ತುಗಳ ಖರೀದಿಗೆ 55,000 ರೂ.ಗಳನ್ನು ಸಂಬಂಧಿಸಿದ ದೇವಾಲಯದಿಂದಲೇ ಭರಿಸಲಾಗುತ್ತದೆ.
Advertisement
Advertisement
ಸಪ್ತಪದಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಸಪ್ತಪದಿ ಅಡಿ ಮದುವೆಯಾಗುವ ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯ ಖರೀದಿಗೆ 5 ಸಾವಿರ ರೂ., ವಧುವಿಗೆ ಹೂವಿನ ಹಾರ, ಧಾರೆ ಸೀರೆ, ರವಿಕೆ ಕಣಕ್ಕೆ 10 ಸಾವಿರ ರೂ. ವಧುವಿಗೆ ಚಿನ್ನದ ತಾಳಿ ಎರಡು ಚಿನ್ನದ ಗುಂಡು ಖರೀದಿಗೆ 40 ಸಾವಿರ ರೂ. ನೀಡಲಾಗುತ್ತದೆ ಎಂದು ಹೇಳಿದರು.
Advertisement
Advertisement
ಇನ್ನು ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಸಿಎಂ ಯಡಿಯೂರಪ್ಪ, ಇತ್ತೀಚಿನ ದಿನಗಳಲ್ಲಿ ವಿವಾಹ ಖರ್ಚಿಗೆ ಮನೆ ಮಠ ಮಾರಿಕೊಂಡು ನಂತರ ತೊಂದರೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಸಾಲ ಮಾಡಿಕೊಂಡು ವಧುವರರು ಮತ್ತು ಅವರ ಪೋಷಕರು ನೋವು ಅನುಭವಿಸುತ್ತಿದ್ದಾರೆ. ಹಾಗಾಗಿಯೇ ಎಲ್ಲ ವರ್ಗದ ಜನರ ಅನುಕೂಲಕ್ಕೆ 100 ಆಯ್ದ ದೇವಾಲಯಗಳಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಹಮ್ಮಿಕೊಳ್ಳುತ್ತಿದ್ದೇವೆ. ವಿವಾಹದ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಮೂಹಿಕ ವಿವಾಹಗಳು ಅವಶ್ಯಕವಾಗಿವೆ. ದೇವರ ದುಡ್ಡು ಸದ್ಬಳಕೆ ಆಗಬೇಕು ಎಂಬುದು ಉದ್ದೇಶ. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.