ಬೆಂಗಳೂರು: ಆಪರೇಷನ್ ಕಮಲದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಯಡಿಯೂರಪ್ಪ ಆಪ್ತ ಸಂತೋಷ್ ಒಂದೇ ದಿನದಲ್ಲಿ ಎರಡು ಉಡುಪಿನಲ್ಲಿ ಕಾಣಿಸಿಕೊಂಡು ಟ್ರಬಲ್ ಶೂಟರ್ ಡಿಕೆಶಿಗೆ ಚಮಕ್ ಕೊಟ್ಟಿದ್ದಾರೆ.
ಇಂದು ಮಧ್ಯಾಹ್ನ ಮುಳುಬಾಗಿಲಿನ ಪಕ್ಷೇತರ ಶಾಸಕ ನಾಗೇಶ್ ಅವರನ್ನು ಸಂತೋಷ್ ಎಚ್‍ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮಂಬೈಗೆ ಕಳುಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪರಮೇಶ್ವರ್ ಬೆಂಬಲಿಗರು ನಾಗೇಶ್ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ.
Advertisement
Advertisement
ಈ ವೇಳೆ ನಾಯಕರ ಆಪ್ತರ ನಡುವೆ ಗಲಾಟೆ ನಡೆದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‍ಎಎಲ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಹೆಚ್.ನಾಗೇಶ್ ವಿಶೇಷ ವಿಮಾನದಲ್ಲಿ ಮುಂಬೈನತ್ತ ಹಾರಿದ್ದರು. ಸಂತೋಷ್ ಜೊತೆ ನಾಗೇಶ್ ತೆರಳಿ ವಿಮಾನ ಹತ್ತುತ್ತಿದ್ದ ಫೋಟೋ ಪಬ್ಲಿಕ್ ಟಿವಿಗೆ ಸಿಕ್ಕಿತ್ತು. ಈ ವೇಳೆ ಸಂತೋಷ್ ನೀಲಿ ಬಣ್ಣದ ಶರ್ಟ್ ಧರಿಸಿದ್ದರು.
Advertisement
Advertisement
ಸಂಜೆ ಪಕ್ಷೇತರ ಶಾಸಕ ಶಂಕರ್ ಪೌರಾಡಳಿತ ಖಾತೆಗೆ ರಾಜೀನಾಮೆ ನೀಡಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಶಂಕರ್ ಅವರನ್ನು ಮುಂಬೈಗೆ ಕಳುಹಿಸಲು ಸಂತೋಷ್ ಸಿದ್ದರಾಗಿದ್ದರು. ಶಂಕರ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅವರ ಆಪರೇಷನ್ ಕಮಲವನ್ನು ವಿಫಲಗೊಳಿಸಲು ಡಿಕೆಶಿ ವಿಮಾನ ನಿಲ್ದಾಣ ಪ್ರವೇಶಿಸಿದ್ದಾರೆ.
ದೆಹಲಿಗೆ ತೆರಳಲು ಡಿಕೆಶಿ ಬಂದಾಗ ಸಂತೋಷ್ ಮುಖಾಮುಖಿಯಾಗಿದ್ದಾರೆ. ನಿಲ್ದಾಣದ ಒಳಗಡೆ ಅಲ್ಲಿದ್ದ ಸಾರ್ವಜನಿಕರ ಮುಂದೆಯೇ ಶಿವಕುಮಾರ್ ಮತ್ತು ಸಂತೋಷ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ನೀನು ಇನ್ನೂ ಬಚ್ಚಾ, ಎಳಸು ಎಂದು ಡಿ.ಕೆ.ಶಿವಕುಮಾರ್ ಅವಾಜ್ ಹಾಕಿದಾಗ ವಿಮಾನ ನಿಲ್ದಾಣದಿಂದ ಹೊರ ಬಂದ ಸಂತೋಷ್, ಮಾಧ್ಯಮಗಳನ್ನು ಕಂಡ ಕೂಡಲೇ ಓಡೋಡಿ ಹೋಗಿ ಕಾರು ಹತ್ತಿಕೊಂಡಿದ್ದಾರೆ. ಶಿವಕುಮಾರ್ ಅವರ ಪ್ರವೇಶಿಸುವ ಅಷ್ಟರಲ್ಲಿಯೇ ಆರ್.ಶಂಕರ್ ಅವರನ್ನು ಮುಂಬೈನತ್ತ ಕಳುಹಿಸುವಲ್ಲಿ ಸಂತೋಷ್ ಯಶಸ್ವಿಯಾಗಿದ್ದಾರೆ.
ಮಧ್ಯಾಹ್ನ ನಾಗೇಶ್ ಅವರನ್ನು ಕಳುಹಿಸಿದ್ದ ಫೋಟೋ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ಸಂತೋಷ್ ಬಿಳಿ ಬಣ್ಣದ ಶರ್ಟ್ ಧರಿಸಿ ಶಂಕರ್ ಅವರಿಗಾಗಿ ಕಾಯುತ್ತಿದ್ದರು. ಸಂಜೆ ಡ್ರೆಸ್ ಬದಲಿಸಿದ್ದರೂ ಮಾಧ್ಯಮಗಳ ಕ್ಯಾಮೆರಾ ಕಣ್ಣಿನಿಂದ ಸಂತೋಷ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.