– ಸಿಜೆಐ ಗವಾಯಿ ಅವ್ರ ಮೇಲೆ ಶೂ ಎಸೆಯಲು ಯತ್ನಿಸಿರುವುದನ್ನು ನಾನು ಖಂಡಿಸುತ್ತೇನೆ
ಬೆಂಗಳೂರು: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಗವಾಯಿ (CJI BR Gavai) ಅವರ ತಾಯಿ, ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಈ ಕೃತ್ಯ ಎಸಗಿರಬಹುದು ಎಂದು ಸಚಿವ ಸಂತೋಷ್ ಲಾಡ್ (Santosh Lad) ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಜೆಐ ಮೇಲೆ ಶೂ ಎಸೆಯಲು ಮುಂದಾದ ಘಟನೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ನಾಚಿಕೆಗೇಡಿನ ವಿಷಯ. ವೈಯಕ್ತಿಕವಾಗಿ ನಾನು ಇದನ್ನ ಧಿಕ್ಕರಿಸುತ್ತೇನೆ. ಭಾರತದಲ್ಲಿ ಎಲ್ಲಾ ಧರ್ಮಗಳು ಬಹಳ ವರ್ಷಗಳಿಂದ ಇವೆ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ಯುವಕರು ಗಮನಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ- ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಮುಂದಾದ ವಕೀಲ
ನನ್ನ ಪ್ರಕಾರ ಸಿಜೆಐ ಅವರ ತಾಯಿ, ಆರ್‌ಎಸ್‌ಎಸ್ ಕಾರ್ಯಕ್ರಮದ ಆಹ್ವಾನ ಸ್ವೀಕರಿಸದ್ದಕ್ಕೆ ಈ ಕೃತ್ಯ ಎಸಗಿರಬಹುದು. ದೇಶದ 25 ಸಾವಿರ ಹಿಂದೂ ಜನರು ಪಾಸ್‌ಪೋರ್ಟ್ ಸರಂಡರ್ ಮಾಡಿ ಹೋಗಿದ್ದಾರೆ. ಶೂ ಎಸೆಯಲು ಯತ್ನಿಸಿದಾತನನ್ನು ಹುಡುಕಿ ತಕ್ಕಪಾಠ ಕಲಿಸಬೇಕು ಎಂದು ಕಿಡಿಕಾರಿದ್ದಾರೆ.
ಇದನ್ನ ಹೆಚ್ಚಾಗಿ ಪ್ರಚಾರ ಮಾಡೋದು ಸರಿಯಲ್ಲ. ರಾಜಕೀಯ ಲಾಭದ ಪ್ರಯತ್ನ ನಡೆಯುತ್ತಿದೆ. ಕಳೆದ 10 ವರ್ಷಗಳಿಂದ ಇದು ನಡೆಯುತ್ತಿದೆ. ಈ ಘಟನೆ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು. ಎಲ್ಲಾ ಸನಾತನ ಧರ್ಮದವರು ಈ ರೀತಿ ಇಲ್ಲ. ಇಡೀ ದೇಶದ ಯುವಜನತೆ ಇದನ್ನ ತಿಳಿಯಬೇಕು. ಎಲ್ಲಾ ಜಾತಿ ಜನಾಂಗ ಒಂದಾಗಬೇಕು. ಇಂತದಕ್ಕೆಲ್ಲ ಅವಕಾಶ ಕೊಡಬಾರದು ಅಂತ ಕರೆ ನೀಡಿದ್ದಾರೆ.