ಮಂಡ್ಯ: ಇವರಿಗೆ ಎರಡೂ ಕಣ್ಣೂ ಕಾಣಲ್ಲ. ಆದ್ರೆ ಇವರು ಮಾಡದೇ ಇರೋ ಕೆಲಸವೇ ಇಲ್ಲ. ಎತ್ತರದ ತೆಂಗಿನ ಮರ ಹತ್ತಿ ಕಾಯಿ ಕೀಳ್ತಾರೆ. ದಿನ ನಿತ್ಯ ಸಾವಿರಾರು ಕಾಯಿ ಸುಲೀತಾರೆ. ಕಣ್ಣಿದ್ದವರೂ ನಾಚಿಸುವಂತೆ ವ್ಯವಸಾಯ ಮಾಡ್ತಾರೆ. ಮಂಡ್ಯದ ಆ ಸ್ವಾಭಿಮಾನಿ ಸಣ್ಣನಂಜೇಗೌಡರೇ ಇಂದಿನ ನಮ್ಮ ಪಬ್ಲಿಕ್ ಹೀರೋ.
ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲೂಕಿನ ಕುಂದೂರು ಗ್ರಾಮದ ಸಣ್ಣನಂಜೇಗೌಡರಿಗೆ ಬುದ್ಧಿ ಬರುವ ಮುನ್ನವೇ ಕಾಯಿಲೆಯಿಂದಾಗಿ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡ್ರು. ಅಪ್ಪಟ ಸ್ವಾಭಿಮಾನಿಯಾದ ಇವರು ಕಣ್ಣಿಲ್ಲ ಅಂತಾ ಕೈ ಕಟ್ಟಿ ಕೂರಲಿಲ್ಲ. ತೆಂಗಿನ ಮರ ಹತ್ತೋದ್ರಿಂದ ಹಿಡಿದು, ದಿನಕ್ಕೆ ನೂರಾರು ಕಾಯಿ ಸುಲಿಯೋದು ಹೀಗೆ ವ್ಯವಸಾಯದ ಎಲ್ಲಾ ಕೆಲಸ ಮಾಡ್ತಾರೆ. ನಾಟಿ ಮಾಡೋದು, ಬೆಳೆ ಕೊಯ್ಲು ಮಾಡೋದು, ದನ ಕರು ಮೇಯಿಸೋದು ಯಾವುದೇ ಕೆಲಸ ಇರಲಿ ಕಣ್ಣಿದ್ದವರಿಗಿಂತ ಏನೂ ಕಮ್ಮಿ ಇಲ್ಲ.
Advertisement
ಸಣ್ಣನಂಜೇಗೌಡರದು ಪತ್ನಿ ಹಾಗೂ ಇಬ್ಬರು ಮಕ್ಕಳ ಚಿಕ್ಕ ಸಂಸಾರ. ಕೇವಲ 20 ಗುಂಟೆಯಷ್ಟು ಜಮೀನಿದೆ. ಸಂಸಾರ ಸುಸೂತ್ರವಾಗಿ ನಡೆಯಲು ಅಂಧತ್ವ ಸಮಸ್ಯೆಯಾಗಬಾರದೆಂದು ಬೇರೆ ಕೆಲಸ ಕೂಡಾ ಮಾಡ್ತಾರೆ. ದೇಹದಲ್ಲಿ ಉಸಿರು ಇರೋತನಕ ದುಡಿದೇ ತಿನ್ನಬೇಕು ಎನ್ನುವ ಸಣ್ಣನಂಜೇಗೌಡರ ಆದರ್ಶ ಗ್ರಾಮದ ಯುವಕರಿಗೆ ಮಾದರಿಯಾಗಿದೆ.
Advertisement
ಕಣ್ಣು ಇಲ್ಲದೇ ಇರುವುದು ಸಮಸ್ಯೆಯಲ್ಲ. ಆದ್ರೆ ಕಣ್ಣಿಲ್ಲ ಎಂದು ಕೊರಗುತ್ತಾ ಬೇರೆಯವರಿಗೆ ಹೊರೆಯಾಗಿ ಬದುಕುವುದು ನಿಜವಾದ ಸಮಸ್ಯೆ ಎಂದು ಸಾರುವ ಸಣ್ಣನಂಜೇಗೌಡರು ನಮ್ಮ ಪಬ್ಲಿಕ್ ಹೀರೋ ಎಂದು ಹೇಳಲು ನಮಗೆ ಹೆಮ್ಮೆ.