ಧಾರವಾಡ: ಸಂಕ್ರಮಣ ಹಬ್ಬಕ್ಕೆ ಇರುವ ಜಾನಪದ ಹಿನ್ನೆಲೆ ಇತ್ತೀಚೆಗೆ ಮರೆಯಾಗಿಯೇ ಹೋಗಿದೆಯಾದ್ರೂ, ಸಾಂಸ್ಕೃತಿಕ ನಗರಿ ಧಾರವಾಡದಲ್ಲಿ ಮಾತ್ರ ಇಂದಿಗೂ ಸಂಕ್ರಮಣವನ್ನು ಜಾನಪದ ಹಬ್ಬವನ್ನಾಗಿಯೇ ಆಚರಿಸಿಕೊಂಡು ಬರಲಾಗಿದೆ. ಈ ಹಬ್ಬವನ್ನ ಆಚರಣೆ ಮಾಡುವ ಜಾನಪದ ಸಂಶೋಧನಾ ಕೇಂದ್ರ ಈಗಲೂ ಹಳೆಯ ಹಾಡುಗಳಿಂದಲೇ ಹಬ್ಬವನ್ನ ಆರಂಭ ಮಾಡುತ್ತದೆ.
ಧಾರವಾಡದ ಸಾಧನಕೆರೆ ಉದ್ಯಾನದಲ್ಲಿ ಜಾನಪದ ಸಂಶೋಧನಾ ಕೇಂದ್ರ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಅನ್ನೋ ವಿಶಿಷ್ಟ ಕಾರ್ಯಕ್ರಮದಲ್ಲಿ ಮರೆತು ಹೋದ ನಮ್ಮ ಜಾನಪದ ಸಂಸ್ಕೃತಿಯನ್ನು ನೆನಪಿಗೆ ತರೋ ಪ್ರಯತ್ನವನ್ನು ಮಾಡಲಾಯ್ತು. ಒಂದು ಕಡೆ ಜಾನಪದ ವಿದ್ವಾಂಸ ಬಸಲಿಂಗಯ್ಯ ಹಿರೇಮಠರಿಂದ ಜಾನಪದ ಗೀತೆಗಳ ಮಾಧುರ್ಯ ಬರುತ್ತಿದ್ದರೆ, ಅದಕ್ಕೆ ತಕ್ಕಂತೆ ಸಂಪ್ರದಾಯಿಕ ಉಡುಗೆ ತೊಟ್ಟಿದ್ದ ಮಹಿಳೆಯರು ಜಾನಪದ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು. ಇನ್ನು ಉಳಿದವರೆಲ್ಲ ಹಾಡಿಗೆ ಧ್ವನಿಗೂಡಿಸಿ ನೃತ್ಯಕ್ಕೆ ಚಪ್ಪಾಳೆ ತಟ್ಟಿದರು.
Advertisement
Advertisement
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ಮಹಿಳೆಯರು ಕೂಡ ತಹ ತರಹದ ಭಕ್ಷ್ಯಗಳನ್ನು ಮಾಡಿಕೊಂಡು ಬಂದಿದ್ದರು. ಸಂಕ್ರಮಣದ ಪ್ರಮುಖ ಸಿಹಿ ಪದಾರ್ಥ ಮಾದಲಿ ಜೊತೆಗೆ ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಬದನೆಕಾಯಿ, ವಿವಿಧ ಕಾಳಿನ ಪಲ್ಯ, ನಾನಾ ಬಗೆಯ ಚಟ್ನಿಗಳನ್ನು ಮಾಡಿಕೊಂಡು ಬಂದಿದ್ದರು. ಎಲ್ಲರೂ ತಂದಿದ್ದ ಆಹಾರಗಳನ್ನು ಸೇರಿಸಿ, ಉದ್ಯಾನದಲ್ಲಿಯೇ ಗಂಗಾ ದೇವಿಯನ್ನು ಪ್ರತಿಷ್ಠಾಪಿಸಿ, ಸಾಂಕೇತಿಕವಾಗಿ ಪೂಜೆ ಮಾಡಿದ ಬಳಿಕ ಎಲ್ಲರೂ ತಾವು ಬಂದಿದ್ದ ಆಹಾರ ಪದಾರ್ಥಗಳನ್ನು ವಿನಿಮಯ ಮಾಡಿಕೊಂಡು ಸೇವಿಸಿದರು. ಜೊತೆಗೆ ಕಾರ್ಯಕ್ರಮದ ಮಧ್ಯೆ ನಡೆದ ದಂಪತಿಗಳ ವಿಶೇಷ ನಡಿಗೆ ಹಬ್ಬದ ಸಂಭ್ರಮಕ್ಕೆ ಮೆರಗು ತಂತು.
Advertisement
Advertisement
ಸಾಂಸ್ಕೃತಿಕ ನಗರಿ ಎಂಬ ಧಾರವಾಡದ ಖ್ಯಾತಿಗೆ ಮೆರಗು ತರುವ ನಿಟ್ಟಿನಲ್ಲಿ ಬೇಂದ್ರೆಯವರ ಸಾಧನಕೆರೆ ಉದ್ಯಾನದ ಅಂಗಳದಲ್ಲಿ ನಡೆದ ಈ ಪುಟ್ಟ ಸಂಕ್ರಮಣ ಸಂಭ್ರಮ ಜಾನಪದದ ಕೊಡು ಕೊಳ್ಳುವಿಕೆಯ ಪ್ರತೀಕವಾಗಿ ಹೊರಹೊಮ್ಮಿತು. ಹೀಗಾಗಿ ಕೊನೆಗೆ ಎಲ್ಲರೂ ಎಳ್ಳು ಬೆಲ್ಲದಂತೆ ಇರೋಣ ಎಂದು ಹಾರೈಸುತ್ತ ಸಂಭ್ರಮದಿಂದ ಎಳ್ಳು ಬೆಲ್ಲ ಹಂಚಿದ್ದು ಸಂಕ್ರಮಣ ಹಬ್ಬದ ವಿಶೇಷತೆ ಹೆಚ್ಚಿಸಿತು.