ಪ್ರೀ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಸಂಜು ವೆಡ್ಸ್ ಗೀತಾ

Public TV
2 Min Read
Sanju Weds Geeta 2 1

ನಿರ್ದೇಶಕ ನಾಗಶೇಖರ್ ಸಾರಥ್ಯದ ‘ಸಂಜು ವೆಡ್ಸ್ ಗೀತಾ-2’ (Sanju Weds Geeta 2) ಪ್ರಾರಂಭದಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.  ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು  ನಾಗಶೇಖರ್  ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ  ರಮ್ಯಾ ಬದಲು ರಚಿತಾರಾಮ್ ಎಂಟ್ರಿಯಾಗಿದ್ದಾರೆ. ಈ ಚಿತ್ರದ ಪ್ರೀ ಕ್ಲೈಮ್ಯಾಕ್ಸ್  (Pre Climax) ದೃಶ್ಯದ ಚಿತ್ರೀಕರಣ ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಅಲ್ಲಿ ನಾಯಕ ಶ್ರೀನಗರ ಕಿಟ್ಟಿ ಒಬ್ಬ ಸೈನಿಕನ ಗೆಟಪ್ ನಲ್ಲಿದ್ದರು. ಜರ್ಮನ್ ಸೈನಿಕರ ವಿರುದ್ದ ಸೆಣೆಸಾಟ ನಡೆಸಿ  ಅವರ  ಹಿಡಿತದಿಂದ  ರಾಣಿಯನ್ನು ಬಿಡಿಸಿಕೊಂಡು ಬರುವ ಸನ್ನಿವೇಶವದು. ಆ ದೃಶ್ಯವನ್ನು ಗ್ರೀನ್ ಮ್ಯಾಟ್ ನಲ್ಲಿ ಚಿತ್ರೀಕರಿಸಲಾಗುತ್ತಿತ್ತು.

Sanju Weds Geeta 2 4

ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ  ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ನಟಿ ರಾಗಿಣಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ  ನಟ ಚೇತನ್ ಚಂದ್ರ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಾಗಶೇಖರ್, ಈಗಾಗಲೇ ಚಿತ್ರದ ಬಹುತೇಕ  ಚಿತ್ರೀಕರಣ ಮುಗಿದಿದೆ. ಇದು ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಸೀನ್. ಇದರ ನಂತರ ನೆದರ್ ಲ್ಯಾಂಡ್ನಲ್ಲಿ ಚಿತ್ರೀಕರಣ ಮುಂದುವರಿಯುತ್ತದೆ. ನಿರ್ಮಾಪಕ ಕುಮಾರ್ ಅವರ ಸಹಕಾರದಿಂದ ಚಿತ್ರದ ಚಿತ್ರೀಕರಣ ಅಂದುಕೊಂಡ ಪ್ಲಾನ್ ಪ್ರಕಾರ ಸರಾಗವಾಗಿ ಮುಗಿಯುತ್ತಿದೆ. ಹನ್ನೆರಡು ಕೋಟಿ ಅಂದುಕೊಂಡ ಬಜೆಟ್ ಈಗ ಹದಿನೈದು ಕೋಟಿಯಾಗಿದೆ.

Sanju Weds Geeta 2 1

ಶೂಟಿಂಗ್ ಜೊತೆಗೇ ಎಡಿಟಿಂಗ್ ಸೇರಿದಂತೆ ಚಿತ್ರದ ಪೋಸ್ಟ ಪ್ರೊಡಕ್ಷನ್ ಕೆಲಸಗಳು ಬಹುತೇಕ  ಮುಗಿದಿವೆ‌  ಅಂದುಕೊಂಡ ಹಾಗೆ ದಸರಾ ವೇಳೆಗೆ ಚಿತ್ರವನ್ನು ತೆರೆಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ.  ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಚಿತ್ರೀಕರಣ ಮಾಡಿದ್ದೇವೆ. ಈಗ ನೆದರ್ ಲ್ಯಾಂಡ್ ಗೆ ಹೋಗ್ತಿದ್ದೇವೆ  ಎಂದು ಹೇಳಿದರು. ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಈಗಾಗಲೇ ನಾವು ಶೂಟಿಂಗ್ ಕೊನೇ ಹಂತಕ್ಕೆ ಬಂದಿದ್ದೇವೆ. ಅಂದುಕೊಂಡ ಹಾಗೆ ಚಿತ್ರ ಮೂಡಿಬರುತ್ತಿದೆ. ಒಂದು  ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಚಿತ್ರ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.

 

ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ  5 ಸುಂದರವಾದ ಹಾಡುಗಳನ್ನು  ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.  ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ.

Share This Article