ಕೋಲ್ಕತ್ತಾ: ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (RG Kar Medical College and Hospital) ಕರ್ತವ್ಯನಿರತ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್ ವಿರುದ್ಧ ಕೇಂದ್ರೀಯ ತನಿಖಾ ದಳ (CBI) ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಸೋಮವಾರ ಮಧ್ಯಾಹ್ನ ಸೀಲ್ದಾಹ್‌ನಲ್ಲಿರುವ ಕೋಲ್ಕತ್ತಾದ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ದೋಷಾರೋಪ ಪಟ್ಟಿ (Chargesheet) ಸಲ್ಲಿಸಿದೆ. ವಿರಾಮದ ಸಮಯದಲ್ಲಿ ಟ್ರೈನಿ ವೈದ್ಯೆ ಆಸ್ಪತ್ರೆ ಸೆಮಿನಾರ್ ಕೊಠಡಿಯಲ್ಲಿ ವಿಶ್ರಾಂತಿಗೆ ಹೋದಾಗ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಸಿಬಿಐ ಮೂಲಗಳ ಪ್ರಕಾರ, ಚಾರ್ಚ್ಶೀಟ್‌ನಲ್ಲಿ ಆರೋಪಿ ಸಂಜಯ್ ರಾಯ್ ಹೆಸರಿಸಿರುವ ಸುಮಾರು 200 ಜನರ ಹೇಳಿಕೆಗಳನ್ನ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವರು ಗ್ಯಾಂಗ್ ರೇಪ್ ಆಗಿರಬಹುದು ಎಂದು ಶಂಕಿಸಿ ಹೇಳಿಕೆ ನೀಡಿದ್ದಾರೆ ಎಂದು ಚಾರ್ಚ್ಶೀಟ್‌ನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
Advertisement
ಆಗಸ್ಟ್ 9ರಂದು ಟ್ರೈನಿ ವೈದ್ಯೆ ಹತ್ಯೆಗೀಡಾದ ನಂತರ ತನಿಖಾ ಹಂತದಲ್ಲಿ ಒಂದೊಂದೇ ಭಯಾನಕ ಸತ್ಯಗಳು ಬಯಲಾಗುತ್ತಾ ಹೋದವು. ಇದರಿಂದ ದೇಶವ್ಯಾಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಇದರಿಂದ ಎಚ್ಚೆತ್ತ ಹೈಕೋರ್ಟ್ ಕೋಲ್ಕತ್ತಾ ಪೊಲೀಸರಿಂದ ಸಿಬಿಐಗೆ ತನಿಖೆ ವಹಿಸುವಂತೆ ಸೂಚಿಸಿತು. ಬಳಿಕ ಆರೋಪಿ ಹೇಳಿಕೆ ಆಧರಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಸಿಬಿಐ ಅಂದಿನ ಪ್ರಾಂಶುಪಾಲನಾಗಿದ್ದ ಸಂದೀಪ್ ಘೋಷ್ ಅವರನ್ನೂ ಬಂಧಿಸಿ ತನಿಖೆ ನಡೆಸಿತು.
Advertisement
ಕೋಲ್ಕತ್ತಾ ಪ್ರಕರಣ ಏನು?
ಕಳೆದ ಆ.9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸ್ ಸ್ವಯಂ ಸೇವಕನಾಗಿದ್ದ ಈತ 4 ಬಾರಿ ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು. ಈ ಪ್ರಕರಣದ ತನಿಖೆ ಹೊಣೆ ಹೊತ್ತಿದ್ದ ಸಿಬಿಐ ಇದೀಗ ದೋಷಾರೋಪ ಪಟ್ಟಿ ಸಲ್ಲಿಸಿದೆ.