ಬೆಂಗಳೂರು: ಈಜೀಪುರ ಕಟ್ಟಡ ಕುಸಿತ ದುರಂತದಲ್ಲಿ ಪವಾಡ ಸದೃಶ್ಯವಾಗಿ ಬದುಕುಳಿದಿದ್ದ ಬಾಲಕಿ ಸಂಜನಾ ಮೃತ ಪಟ್ಟಿದ್ದಾಳೆ.
ಅಕ್ಟೋಬರ್ 16 ರಂದು ನಡೆದಿದ್ದ ಕಟ್ಟಡ ಕುಸಿತ ದುರಂತದಲ್ಲಿ ಕಟ್ಟಡದ ಅವಷೇಶಗಳ ಅಡಿಯಲ್ಲಿ ಸಿಲುಕಿದ್ದ ಬಾಲಕಿ ಸಂಜನಾರನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೂರು ದಿನಗಳ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಂಜನಾ ಮೃತಪಟ್ಟಿದ್ದಾಳೆ.
ಸಂಜನಾ ಸಾವಿಗೆ ಪ್ರಮುಖ ಕಾರಣ ಬಾಲಕಿಯ ದೇಹ ಶೇ. 60 ರಷ್ಟು ಸುಟ್ಟು ಹೋಗಿತ್ತು. ಮೊದಲ ಎರಡು ದಿನಗಳ ಅವಧಿಯಲ್ಲಿ ಸಂಜನಾ ದೇಹ ಚಿಕಿತ್ಸೆಗೆ ಸ್ಪಂದಿಸಿದರು ನಂತರ ಬಾಲಕಿಯ ದೇಹ ಯಾವುದೇ ರೀತಿ ಚೇತರಿಕೆ ಕಾಣಲಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಏನಾಗಿತ್ತು?: ಅಕ್ಟೋಬರ್ 16ರ ಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 2 ಅಂತಸ್ತಿನ ಮನೆ ಕುಸಿದು ಏಳು ಜನರು ಮೃತಪಟ್ಟಿದ್ದರು. ಗ್ರೀನ್‍ವ್ಯೂ ಹೋಟೆಲ್ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ಬೆಳಗ್ಗೆ 7.10ಕ್ಕೆ ಕಟ್ಟಡದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸುಮಾರು 7.15ಕ್ಕೆ ಕಟ್ಟಡ ಕುಸಿದಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳ ಸಿಬ್ಬಂದಿಯ ಮೇಲೂ ಗೋಡೆ ಕುಸಿದಿದ್ದು ಸುರೇಶ್, ಸುಬಾನ್, ಸೋಮಶೇಖರ್ ಎಂಬವರಿಗೆ ಗಾಯಗೊಂಡಿದ್ದರು. ಸುಮಾರು 20 ವರ್ಷ ಹಳೆಯ ಕಟ್ಟಡ ಇದಾಗಿದ್ದು, ಬ್ಯಾಚುಲರ್ಸ್ ಸುಮಾರು 5-6 ವರ್ಷದಿಂದ ಈ ಕಟ್ಟಡದಲ್ಲಿ ನೆಲೆಸಿದ್ದರು. ಘಟನೆಯಿಂದಾಗಿ ಅಕ್ಕಪಕ್ಕದ ಮನೆಗಳೂ ಕೂಡ ಬಿರುಕುಬಿಟ್ಟಿತ್ತು.
https://www.youtube.com/watch?v=Ybpd5J__WuM